ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಿನಿ ಮೊಸರಿನ ದರ ಏರಿಕೆ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (KMF) ಕೊನೆಗೂ ಗ್ರಾಹಕರಿಗೆ ಕೊಂಚ ರಿಲೀಫ್ ನೀಡಿದೆ.
ಮೊಸರಿನ ದರವನ್ನು ಕನಿಷ್ಠ 2 ಕಡಿತಗೊಳಿಸುವಂತೆ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿದ 20 ದಿನಗಳ ಬಳಿಕ ಎಚ್ಚೆತ್ತುಕೊಂಡಿರುವ ಕೆಎಂಎಫ್, ಪ್ರತಿ ಲೀಟರ್ ಮೊಸರಿಗೆ 2 ರೂ. ಹಾಗೂ ಅರ್ಧ ಲೀಟರ್ ಪ್ಯಾಕ್ಗೆ 1 ರೂ. ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ದರಗಳು ನವೆಂಬರ್ 29ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿವೆ.
ಏನಿದು ದರ ಏರಿಕೆ ವಿವಾದ?
ಇತ್ತೀಚೆಗೆ ಕೊಬ್ಬಿನಾಂಶದ ಆಧಾರದ ಮೇಲೆ ಹಾಲಿನ ದರವನ್ನು ಪ್ರತಿ ಲೀಟರ್ಗೆ 8ರೂ. ರಿಂದ 14 ರೂ. ರವರೆಗೆ ಏರಿಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕೆಎಂಎಫ್ ಸದ್ದಿಲ್ಲದೆ ಮೊಸರಿನ ದರವನ್ನೂ ಪ್ರತಿ ಲೀಟರ್ಗೆ ಬರೋಬ್ಬರಿ 14 ರೂ.ಮತ್ತು ಅರ್ಧ ಲೀಟರ್ಗೆ 6 ರೂ. ಹೆಚ್ಚಿಸಿತ್ತು. ಏಕಾಏಕಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದರ ಏರಿಸಿದ್ದಕ್ಕೆ ಗ್ರಾಹಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ಇದನ್ನೂ ಓದಿ:
20 ದಿನಗಳ ವಿಳಂಬ, ಸಾರ್ವಜನಿಕರ ಟೀಕೆ
ಜನರ ಆಕ್ರೋಶವನ್ನು ಗಮನಿಸಿದ ಡಿ.ಕೆ. ಶಿವಕುಮಾರ್ ಅವರು, ಏರಿಕೆ ಮಾಡಿರುವ ದರದಲ್ಲಿ ಕನಿಷ್ಠ 2 ರೂ.ಇಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ, ಸೂಚನೆ ನೀಡಿ 20 ದಿನಗಳು ಕಳೆದರೂ ಕೆಎಂಎಫ್ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಈ ವಿಳಂಬದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ಇದೀಗ ಕೆಎಂಎಫ್ ಅಧಿಕೃತವಾಗಿ ಮೊಸರಿನ ದರ ಇಳಿಕೆ ಮಾಡಿ ಆದೇಶಿಸಿದೆ.



