October 17, 2026
Saturday, October 17, 2026
spot_img

ವಾಟಾಳ್ ಪಕ್ಷ ಸಹಿತ 6 ರಾಜಕೀಯ ಪಕ್ಷಗಳಿಗೆ ಶೋಕಾಸ್ ನೊಟೀಸ್ ಕೊಟ್ಟ ಆಯೋಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೂರು ವರ್ಷಗಳಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷಗಳು ತನ್ನ ವಾರ್ಷಿಕ ಲೆಕ್ಕಪರಿಶೋಧಕ ಖಾತೆಗಳ ಮಾಹಿತಿಯನ್ನು ಆಯೋಗದ ಅನುಸಾರ ನಿಗದಿತ ಅವಧಿಯೊಳಗೆ ಸಲ್ಲಿಸದ ಕಾರಣ ಚುನಾವಣಾ ಆಯೋಗವು ಶೋಕಾಸ್ ನೊಟೀಸ್ ಜಾರಿಗೊಳಿಸಿದೆ ಎಂದು ಬೆಂಗಳೂರು ನಗರ ಅಪರ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಜಗದೀಶ.ಜಿ ಅವರು ತಿಳಿಸಿದ್ದಾರೆ.

ಭಾರತೀಯ ಡಾ. ಬಿ.ಆರ್. ಅಂಬೇಡ್ಕರ್ ಜನತಾ ಪಕ್ಷ, ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ, ಕನ್ನಡ ಚಳವಳಿ ವಾಟಾಳ್ ಪಕ್ಷ, ಕನ್ನಡ ಪಕ್ಷ, ಕರ್ನಾಟಕ ರಾಜ್ಯ ರೈಯೋಟ ಸಂಘ, ಕರ್ನಾಟಕ ಕಾರ್ಮಿಕರ ಪಕ್ಷ ರಾಜಕೀಯ ಪಕ್ಷ ಈಗಾಗಲೇ ರಿಜಿಸ್ಟರ್ ಮಾಡಿಕೊಂಡಿದ್ದು, ದಾಖಲೆಗಳ ಪ್ರಕಾರ ಈ ಪಕ್ಷಗಳು ಮೂರು ವರ್ಷಗಳಿಂದ (2021-22, 2022-23 ಹಾಗೂ 2023-24) ತನ್ನ ವಾರ್ಷಿಕ ಲೆಕ್ಕಪರಿಶೋಧಕ ಖಾತೆಗಳ ಮಾಹಿತಿಯನ್ನು ಆಯೋಗದ ಅನುಸಾರ ನಿಗದಿತ ಅವಧಿಯೊಳಗೆ ನಮೂನೆ ಪತ್ರದ ಮೂಲಕ ಸಲ್ಲಿಸಿರುವುದಿಲ್ಲ.

ನೋಂದಾಯಿತ ಮಾನ್ಯತೆಯನ್ನು ಪಡೆಯದ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗವು ಸಂವಿಧಾನದ 324ನೇ ವಿಧಿಯಡಿ ಜನ ಪ್ರಾತಿನಿಧ್ಯ ಕಾಯ್ದೆ 1951 ಸೆಕ್ಷನ್ 29ಎ ನಿಬಂಧನೆಗಳ ಅಡಿಯಲ್ಲಿ ಪಕ್ಷಗಳ ನೋಂದಣಿಯನ್ನು ಏಕೆ ರದ್ದು ಮಾಡಬಾರದು ಎಂದು ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿಮಾಡಿದೆ.

ಒಂದು ವೇಳೆ ನಿಗದಿತ ದಿನಾಂಕದಂದು ಹಾಜರಾಗಿ ಉತ್ತರ ನೀಡದಿದ್ದಲ್ಲಿ ಪಕ್ಷದ ಯಾವುದೇ ಹೇಳಿಕೆ ಇರುವುದಿಲ್ಲವೆಂದು ಪರಿಗಣಿಸಿ, ಪಕ್ಷವನ್ನು ಸಂಪರ್ಕಿಸದೇ ಚುನಾವಣಾ ಆಯೋಗದಿಂದ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಜಗದೀಶ.ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Must Read