June 26, 2026
Friday, June 26, 2026
spot_img

ರಾಜ್ಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ : ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರತಿಯೊಬ್ಬ ಮನುಷ್ಯನಿಗೂ ಕ್ರೀಡೆ ಎನ್ನುವುದು ಬಹಳ ಮುಖ್ಯ. ಉತ್ತಮ ಆರೋಗ್ಯ ಪಡೆಯಲು ಕ್ರೀಡೆ, ವ್ಯಾಯಾಮ ಅತ್ಯಂತ ಅಗತ್ಯ ಎಂದು ಶ್ರೀ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.


ಚಿತ್ರದುರ್ಗ ಕ್ರಿಕೆಟ್ ಕ್ಲಬ್ ಮತ್ತು ಯಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ವತಿಯಿಂದ ಚಿತ್ರದುರ್ಗ ನಗರದ ಶ್ರೀ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಒನಕೆ ಓಬವ್ವ ರಾಜ್ಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಕ್ರೀಡೆ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ. ಸೋತವರು ಮುಂದಿನ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಲು ತಯಾರಾಗಬೇಕಿದೆ. ಅದೇ ರೀತಿ ಗೆದ್ದವರು ಬೀಗದೆ ಮತ್ತಷ್ಟು ಪಂದ್ಯಗಳನ್ನು ಗೆಲ್ಲಲು ಅಭ್ಯಾಸ ಮಾಡುವಲ್ಲಿ ನಿರತರಾಗಬೇಕು ಎಂದರು.


ಚಿತ್ರದುರ್ಗದಲ್ಲಿ ಸದಾ ಒಂದಲ್ಲಾ ಒಂದು ಕ್ರೀಡೆಗಳು ನಡೆಯುತ್ತಿರುತ್ತವೆ. ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಿರಂತರವಾಗಿ ಕ್ರೀಡೆಗಳು ನಡೆಯುತ್ತಿರುತ್ತವೆ. ನಮ್ಮ ಮಠವೂ ಸಹಾ ಕ್ರೀಡೆಗೆ ಪ್ರೋತ್ಸಾಹ ನೀಡುತ್ತ್ತಿದೆ. ನಮ್ಮಲ್ಲಿನ ಕ್ರೀಡಾಪಟುಗಳು ಚನ್ನಾಗಿ ಅಭ್ಯಾಸವನ್ನು ಮಾಡಿ ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಆಟವನ್ನು ಆಡುವ ಮೂಲಕ ಚಿತ್ರದುರ್ಗಕ್ಕೆ ಉತ್ತಮ ಹೆಸರು ತರಬೇಕೆಂದು ಸಲಹೆ ಮಾಡಿದರು.


ಚಿತ್ರದುರ್ಗ ಜಿಲ್ಲೆ ತನ್ನದೇ ಆದ ಇತಿಹಾಸ ಹೊಂದಿದೆ. ಇಲ್ಲಿ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಬುಡಕಟ್ಟು ಸಂಪ್ರದಾಯದ ಪರಂಪರೆ ಇದೆ. ಇಲ್ಲಿ ಎಲ್ಲದಕ್ಕೂ ಪ್ರೋತ್ಸಾಹ ನೀಡುವಂತಹ ದಾನಿಗಳು ಇದ್ದಾರೆ. ಇವರ ಮೂಲಕ ವಿವಿಧ ಚಟುವಟಿಕೆಗಳನ್ನು ಬೆಳಸಬೇಕಿದೆ. ಕ್ರಿಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಉತ್ತಮ ಸಾಧನೆ ಮಾಡಬಹುದು. ಯೋಗ, ಧ್ಯಾನ, ಕ್ರೀಡೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಶ್ರೀಗಳು ಕರೆ ನೀಡಿದರು.


ಹಿರಿಯ ವಕೀಲರು, ಒನಕೆ ಓಬವ್ವ ಕಪ್‌ನ ಅಧ್ಯಕ್ಷರಾದ ಜಿ.ಎಸ್. ಕುಮಾರ್‌ಗೌಡ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಚಿತ್ರದುರ್ಗ ಕ್ರಿಕೆಟ್ ಕ್ಲಬ್ ಮತ್ತು ಯಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ವತಿಯಿಂದ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಈ ರೀತಿಯಾದ ಪಂದ್ಯಾವಳಿಗಳನ್ನು ನಡೆಸುತ್ತಾ ಬರಲಾಗಿದೆ. ಇಂದಿನ ಯುವಪೀಳಿಗೆ ಕೇವಲ ಮೊಬೈಲ್ ಗೇಮ್‌ಗಳಲ್ಲಿ ಕಳೆದುಹೋಗದೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೇಹ ಹಾಗೂ ಮನಸ್ಸನ್ನು ಹಿಡಿತದಲ್ಲಿ ಇಟ್ಟು ಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಶಿಕ್ಷಣಕ್ಕೂ ನೆರವಾಗಲಿದೆ ಎಂದರು.

ಇದನ್ನೂ ಓದಿ:


ಚಿತ್ರದುರ್ಗ ಕ್ರಿಕೆಟ್ ಕ್ಲಬ್‌ನ ಕಾರ್ಯದರ್ಶಿ ಆಶೋಕ್, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ರವಿಕಾಂತ, ಚಿತ್ರದುರ್ಗ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷರಾದ ರಮೇಶ್ ಟಿ., ಅಂತರಾಷ್ಟ್ರೀಯ ಕ್ರೀಡಾಪಟು ಎನ್.ಡಿ.ಕುಮಾರ್, ನಗರಸಭೆಯ ಮಾಜಿ ಅಧ್ಯಕ್ಷರಾದ ನಿರಂಜನಮೂರ್ತಿ, ಹಿರಿಯ ಆಟಗಾರರಾದ ಭಾಸ್ಕರ್, ರವಿಕುಮಾರ್, ಖಾನ್, ತಿಪ್ಪೇರುದ್ರಸ್ವಾಮಿ, ಅರ್ಜುನ, ಕಮಲ್ ಯಾದವ್, ಮಲ್ಲಿಕಾರ್ಜನ್ ಗುರುಮೂರ್ತಿ, ಪೈಲಟ್ ನಾಗರಾಜ್, ವಿಜಯಕುಮಾರ್ ಮಂಜುನಾಥ್ ಗುಪ್ತ ಸೇರಿದಂತೆ ಇತರರು ಭಾಗವಹಿಸಿದ್ದರು.


ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಒಳ್ಳಾರಿ, ಚಿತ್ರದುರ್ಗ, ತುಮಕೂರು, ಸಾಗರ, ಹೊಸದುರ್ಗ, ಬೆಂಗಳೂರು ಕಡೆಗಳಿಂದ ತಂಡಗಳು ಆಗಮಿಸಿದ್ದವು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !