ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಕ್ತ ರಹದಾರಿ ಅನುಮತಿ ಪಡೆದು ಅಡಿಕೆ ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ಅಡ್ಡಗಟ್ಟಿ, ಕಾಂಗ್ರೆಸ್ ಮುಖಂಡ ಹೊಸದುರ್ಗ ತಾಲೂಕಿನ ಕಾರೆಹಳ್ಳಿ ಉಲ್ಲಾಸ್ ಎಂಬಾತ ಹಫ್ತಾ ವಸೂಲಿ ಮಾಡಲು ಯತ್ನಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗಾಗಿ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ಅಡಿಕೆ ಬೆಳೆಗಾರರು ಈಗಾಗಲೇ ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಜಿ.ಎಸ್.ಟಿ ಮತ್ತು ಎಪಿಎಂಸಿ ತೆರಿಗೆಗಳನ್ನು ಕಟ್ಟಿ, ಬಿಲ್ ಹಾಗೂ ರಹದಾರಿ ಪಡೆದು ಸಾಗಿಸಲಾಗುತ್ತಿದ್ದ ಅಡಿಕೆ ಲಾರಿಗಳನ್ನು ಹೊಸದುರ್ಗ ತಾಲೂಕಿನ ಕಾರೆಹಳ್ಳಿ ಉಲ್ಲಾಸ್ ಎಂಬ ವ್ಯಕ್ತಿ ಎನ್.ಹೆಚ್.13ರಲ್ಲಿ ತಡೆದು ನಿಲ್ಲಿಸಿ ರೈತ ವಿರೋಧಿಯಾಗಿ ವರ್ತಿಸುತ್ತಿದ್ದಾನೆ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.
ನಿಮ್ಮ ದಾಖಲೆಗಳು ಸರಿಯಿಲ್ಲ, ಹಣ ಕೊಡಿ ಎಂದು ಆತ ಪೀಡಿಸಿದ್ದಾನೆ. ಚಾಲಕ ಹಣ ನೀಡಲು ನಿರಾಕರಿಸಿದಾಗ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಲಾರಿಯಲ್ಲಿದ್ದ ಅಡಿಕೆ ಮಾಲೀಕರಾದ ಮಂಜುಗೆ ಚಾಲಕ ಫೋನ್ ಮೂಲಕ ಮಾಹಿತಿ ನೀಡಿದ್ದಾನೆ. ತಕ್ಷಣವೇ ಈ ವಿಷಯವನ್ನು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಗಮನಕ್ಕೆ ತರಲಾಗಿದೆ.
ಇದನ್ನೂ ಓದಿ;
ರೈತ ಸಂಘದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪೊಲೀಸ್ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ನಕಲಿ ಜಿ.ಎಸ್.ಟಿ ಅಧಿಕಾರಿಯಂತೆ ವರ್ತಿಸಿ ಕೃತ್ಯ ಎಸಗಿರುವ ಕಾರೆಹಳ್ಳಿ ಉಲ್ಲಾಸ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ರೈತ ಸಂಘಟನೆಗಳ ಮುಖಂಡರು ಪ್ರತಿಭಟನೆಯ ಮೂಲಕ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಈ ವೇಳೆ ಅಡಿಕೆ ಬೆಳೆದ ರೈತರು, ವರ್ತಕರು, ರೈತ ಸಂಘದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.



