ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿರಸಿ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬನ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಇಟಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಂಗನಮನೆಯಲ್ಲಿ ನಡೆದಿದೆ.
ಶಿಂಗನಮನೆಯ ನಿವಾಸಿ ಪರಮೇಶ್ವರ ಬಾಬು ನಾಯ್ಕ (35) ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಶಂಕೆಯ ಮೇಲೆ ಅದೇ ಗ್ರಾಮದ ಪರಮೇಶ್ವರ ತಿಮ್ಮ ನಾಯ್ಕ (27) ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಕ್ರಮ ಸಂಬಂಧದ ಶಂಕೆ ವ್ಯಕ್ತವಾಗಿದ್ದರೂ ಸಹ, ಹತ್ಯೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
ಮೃತ ಪರಮೇಶಿ ಜೂನ್ 25ರ ಸಂಜೆ ಮೊಬೈಲ್ ಕರೆ ಬಂದ ಹಿನ್ನೆಲೆಯಲ್ಲಿ ಮನೆಯ ಸಮೀಪದ ಅರಣ್ಯ ಪ್ರದೇಶದ ಕಡೆಗೆ ತೆರಳಿದ್ದರು. ರಾತ್ರಿಯಾದರೂ ಅವರು ವಾಪಸ್ ಬರದೇ ಇದ್ದಾಗ ಆತಂಕಗೊಂಡ ಗ್ರಾಮಸ್ಥರು ಹುಡುಕಾಟ ನಡೆಸಿ, 112 ತುರ್ತು ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದ್ದು, ಇಂದು ಶುಕ್ರವಾರ ಬೆಳಿಗ್ಗೆ ಅರಣ್ಯ ಪ್ರದೇಶದಲ್ಲಿ ಪರಮೇಶಿಯ ಶವ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ.
ಪಕ್ಕದ ಮನೆಯ ಸಹೋದರನೂ ಆಗಿರುವ ಪರಮೇಶಿಯನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕತ್ತಿಯಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದ ಆರೋಪಿ, ತದನಂತರ ಏನೂ ತಿಳಿಯದವನಂತೆ ಮನೆಯಲ್ಲಿ ಬಂದು ಕುಳಿತಿದ್ದ. ಗ್ರಾಮಸ್ಥರು ಹುಡುಕಾಡುವಾಗ ಕೊಲೆ ನಡೆದ ಜಾಗಕ್ಕೆ ಯಾರನ್ನೂ ಹೋಗಲು ಬಿಡದೆ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ಸ್ಥಳಕ್ಕೆ ಆಗಮಿಸಿದ ಕಾರವಾರದ ಶ್ವಾನದಳವು ನೇರವಾಗಿ ಆರೋಪಿಯ ಮನೆಗೆ ನುಗ್ಗಿ, ಕೊಲೆಗೆ ಬಳಸಿ ಬಚ್ಚಿಟ್ಟಿದ್ದ ಕತ್ತಿಯ ಬಳಿ ಹೋಗಿ ನಿಂತಿದೆ. ಶ್ವಾನ ನೀಡಿದ ನಿಖರ ಸುಳಿವಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ತಕ್ಷಣವೇ ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಹಾಗೂ ಸುಖೋ ತಂಡ ಭೇಟಿ ನೀಡಿ ಸಾಕ್ಷ್ಯ ಕಲೆ ಹಾಕಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಡಿಎಸ್‌ಪಿ ಗೀತಾ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಪಿಐ ರಮೇಶ ಹೂಗಾರ ಹಾಗೂ ಪಿಎಸ್‌ಐ ಸಂತೋಷಕುಮಾರ ಎಂ. ನೇತೃತ್ವದ ತಂಡವು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



