ಮಾನವ ದೇಹದ ಹಲವಾರು ಭಾಗಗಳ ಬಗ್ಗೆ ವಿಜ್ಞಾನಿಗಳು ಹಲವು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದಾರೆ. ಇತ್ತೀಚೆಗೆ ಉಗುರುಗಳು ಮತ್ತೆ ಮತ್ತೆ ಬೆಳೆಯುವ ಪ್ರಕ್ರಿಯೆಯ ಹಿಂದಿನ ರಹಸ್ಯವನ್ನು ಅನಾವರಣಗೊಳಿಸುವ ಮಹತ್ವದ ಆವಿಷ್ಕಾರ ಬೆಳಕಿಗೆ ಬಂದಿದೆ. ಸಂಶೋಧಕರ ಪ್ರಕಾರ, ಉಗುರುಗಳಲ್ಲಿ ಹೊಸ ರೀತಿಯ ಕಾಂಡಕೋಶಗಳನ್ನು ಗುರುತಿಸಲಾಗಿದ್ದು, ಇವು ಉಗುರುಗಳ ಜೊತೆಗೆ ಅದಕ್ಕೆ ಅಂಟಿಕೊಂಡಿರುವ ಚರ್ಮವನ್ನೂ ಪುನಃ ಬೆಳೆಯಲು ಸಹಕಾರಿಯಾಗಿದೆ.
ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಹೇಳುವಂತೆ, ಈ ಹೊಸ ಕಾಂಡಕೋಶಗಳ ವೈಶಿಷ್ಟ್ಯವು ಅತ್ಯಂತ ವಿಭಿನ್ನವಾಗಿದೆ. ಕೂದಲು ಅಥವಾ ಬೆವರು ಗ್ರಂಥಿಗಳಂತಹ ದೇಹದ ಇತರ ಪುನರುತ್ಪಾದಕ ಅಂಗಗಳಲ್ಲಿ ಕಂಡುಬರುವ ಕೋಶಗಳಿಂದ ಸಂಪೂರ್ಣವಾಗಿ ವಿಭಿನ್ನವಾಗಿ, ಇವು ಉಗುರುಗಳ ನಿರಂತರ ಬೆಳವಣಿಗೆಗೆ ಹೊಣೆಗಾರಿಕೆ ಹೊರುತ್ತಿವೆ.
ಇಲಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ, ವಿಜ್ಞಾನಿಗಳು ಹೊಳೆಯುವ ಪ್ರೋಟೀನ್ ಮತ್ತು ಇತರ ಗುರುತುಗಳನ್ನು ಬಳಸಿ ಉಗುರು ಕೋಶಗಳನ್ನು ಗುರುತಿಸಿದರು. ಈ ಕೋಶಗಳು ಹಲವಾರು ಬಾರಿ ವಿಭಜನೆಯಾಗುತ್ತವೆ ಮತ್ತು ವಿಭಜನೆಯ ನಂತರವೂ ತಮ್ಮ ಗುರುತನ್ನು ಮುಂದಿನ ಕೋಶಗಳಿಗೆ ಹಸ್ತಾಂತರಿಸುತ್ತವೆ ಎಂಬುದನ್ನು ಅವರು ಪತ್ತೆಹಚ್ಚಿದ್ದಾರೆ. ಈ ಮಾಹಿತಿಯನ್ನು ‘ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಉಗುರುಗಳು ಉಗುರಿನ ಬುಡದಲ್ಲಿರುವ ಮ್ಯಾಟ್ರಿಕ್ಸ್‌ನಿಂದ ಬೆಳೆಯುತ್ತವೆ. ಈ ಮ್ಯಾಟ್ರಿಕ್ಸ್‌ನಲ್ಲಿರುವ ಕಾಂಡಕೋಶಗಳೇ ಉಗುರುಗಳನ್ನು ನಿರಂತರವಾಗಿ ಬುಡದಿಂದ ಬೆಳೆಯುತ್ತಾ ಮೇಲೆ ಮೇಲೆ ಬರುತ್ತದೆ. ಹೊಸ ಆವಿಷ್ಕಾರದಿಂದಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಉಗುರು ಮತ್ತು ಚರ್ಮಕ್ಕೆ ಸಂಬಂಧಿಸಿದ ಗಾಯಗಳ ಚಿಕಿತ್ಸೆಯಲ್ಲಿ ಹೊಸ ದಾರಿ ತೆರೆದುಕೊಳ್ಳಲಿದೆ ಎಂದು ತಜ್ಞರು ಭಾವಿಸಿದ್ದಾರೆ.