March 16, 2026
Monday, March 16, 2026
spot_img

ಔರಂಗಾಬಾದ್ ರೈಲು ನಿಲ್ದಾಣಕ್ಕೆ ‘ಛತ್ರಪತಿ ಸಂಭಾಜಿನಗರ’ ಹೆಸರು ಮರುನಾಮಕರಣ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಔರಂಗಾಬಾದ್ ನಗರವನ್ನು ಛತ್ರಪತಿ ಸಂಭಾಜಿನಗರ ಮರುನಾಮಕರಣ ಮಾಡಿದ ಮೂರು ವರ್ಷಗಳ ಬಳಿಕ ಔರಂಗಾಬಾದ್ ರೈಲು ನಿಲ್ದಾಣದ ಹೆಸರನ್ನುಅಧಿಕೃತವಾಗಿ “ಛತ್ರಪತಿ ಸಂಭಾಜಿನಗರ ರೈಲು ನಿಲ್ದಾಣ” ಎಂದು ಮರುನಾಮಕರಣ ಮಾಡಲಾಗಿದೆ.

ದಕ್ಷಿಣ ಮಧ್ಯ ರೈಲ್ವೆಯ ನಾಂದೇಡ್ ವಿಭಾಗದ ಅಡಿಯಲ್ಲಿ ಬರುವ ಹೊಸ ನಿಲ್ದಾಣದ ಕೋಡ್ `CPSN’ ಆಗಿರುತ್ತದೆ ಎಂದು ಕೇಂದ್ರ ರೈಲ್ವೆ ತಿಳಿಸಿದೆ.

ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವು ಅಕ್ಟೋಬರ್ 15 ರಂದು ಔರಂಗಾಬಾದ್ ರೈಲು ನಿಲ್ದಾಣದ ಹೆಸರನ್ನು ಬದಲಾಯಿಸಲು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತ್ತು. ಏಕನಾಥ್ ಶಿಂಧೆ ನೇತೃತ್ವದ ಹಿಂದಿನ ಸರ್ಕಾರವು ಔರಂಗಾಬಾದ್ ನಗರವನ್ನು ಛತ್ರಪತಿ ಸಂಭಾಜಿನಗರ ಎಂದು ಔಪಚಾರಿಕವಾಗಿ ಮರುನಾಮಕರಣ ಮಾಡಿದ ಸುಮಾರು ಮೂರು ವರ್ಷಗಳ ಅನಂತರ ರೈಲು ನಿಲ್ದಾಣದ ಹೆಸರು ಬದಲಾವಣೆ ಮಾಡಲಾಗಿದೆ.

ಈ ಹಿಂದೆ ಮೊಘಲ್ ಚಕ್ರವರ್ತಿ ಔರಂಗಜೇಬನ ಹೆಸರಿಡಲಾಗಿದ್ದ ಈ ನಗರವು ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಮತ್ತು ಮರಾಠಾ ರಾಜ್ಯದ ಎರಡನೇ ದೊರೆ ಛತ್ರಪತಿ ಸಂಭಾಜಿಗೆ ಗೌರವ ಸಲ್ಲಿಸುವ ಸಲುವಾಗಿ ಹೊಸ ಹೆಸರನ್ನು ನೀಡಲಾಗಿದೆ.

ಔರಂಗಾಬಾದ್ ರೈಲು ನಿಲ್ದಾಣವನ್ನು 1900 ರಲ್ಲಿ ಹೈದರಾಬಾದ್‌ನ 7ನೇ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಆಳ್ವಿಕೆಯಲ್ಲಿ ತೆರೆಯಲಾಗಿತ್ತು. ಪ್ರವಾಸಿ ಕೇಂದ್ರವು ಆಗಿರುವ ಛತ್ರಪತಿ ಸಂಭಾಜಿನಗರಕ್ಕೆ ಸಮೀಪವಾಗಿ ಅಜಂತಾ, ಎಲ್ಲೋರಾ ಗುಹೆಗಳು ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳಿವೆ. ಇವೆರಡೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !