ಹೊಸದಿಗಂತ ವರದಿ, ಮಡಿಕೇರಿ:
ಚೆಟ್ಟಳ್ಳಿ ಸಮೀಪದ ಅಬ್ಯಾಲದಲ್ಲಿ ನಿರ್ಮಿಸಿರುವ ಕಳಪೆ ಗುಣಮಟ್ಟದ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಹಂತದಲ್ಲೇ ಕುಸಿದಿದ್ದು, ಚೆಟ್ಟಳ್ಳಿಯ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಘಟನಾ ಸ್ಥಳಕ್ಕೆ ಆಗಮಿಸಿ ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ಸುರಿದ ಮಹಾ ಮಳೆಗೆ ಚೆಟ್ಟಳ್ಳಿ- ಕತ್ತಲೆಕಾಡು ನಡುವೆ ಭೂಕುಸಿತ ಉಂಟಾಗಿ ರಸ್ತೆ ಅಪಾಯದ ಮಟ್ಟ ತಲುಪಿತ್ತು. ಲೋಕೊಪಯೋಗಿ ಇಲಾಖೆಯು ಟೆಂಡರ್ ಮೂಲಕ ಖಾಸಗಿ ಗುತ್ತಿಗೆದಾರರಿಗೆ ಕಾಮಗಾರಿಯನ್ನು ಗುತ್ತಿಗೆ ನೀಡಿದ್ದು, ಕಳೆದ ಮಳೆಗಾಲದಿಂದಲೇ ಕಾಂಕ್ರೀಟ್ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗಿತ್ತು. ಸ್ಥಳೀಯರು ಹಾಗೂ ಸುತ್ತಲಿನ ತೋಟದ ಮಾಲಕರು ಕಳಪೆ ಗುಣಮಟ್ಟದ ಅವೈಜ್ಞಾನಿಕ ತಡೆಗೋಡೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದರೂ ಕಾಮಗಾರಿ ನಿರಾತಂಕವಾಗು ನಡೆಯುತ್ತಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿ ಎರಡು ದಿನಗಳ ನಂತರ ಮಣ್ಣನ್ನು ಸುರಿಯುತ್ತಿದ್ದ ಸಂದರ್ಭ ತಡೆಗೋಡೆ ಕುಸಿದು ವಿನ್ಸಿ ಅಪ್ಪಯ್ಯ ಎಂಬವರ ಕಾಫಿ ತೋಟಕ್ಕೆ ಭಾರೀ ನಷ್ಟ ಉಂಟು ಮಾಡಿದೆ.
ಸ್ಥಳೀಯರ ಆಕ್ರೋಶ: ಸ್ಥಳಕ್ಕೆ ಆಗಮಿಸಿದ ಚೆಟ್ಟಳ್ಳಿ ಗ್ರಾಮಸ್ಥರು ಹಾಗೂ ವಾಹನ ಚಾಲಕರು, ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಕಳಪೆ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಸ್ಥಳದಲ್ಲೇ ಇದ್ದ ಗುತ್ತಿಗೆದಾರನ್ನು ಸ್ಥಳೀಯರು ವಿಚಾರಿಸಿದಾಗ ಕಾಮಗಾರಿ ಮಾಡಿದ್ದು, ನಾನಲ್ಲವೆಂದು ಹೇಳಿ ಅಲ್ಲಿಂದ ಕಾಲ್ಕಿತ್ತರು.
ಗ್ರಾಮಸ್ಥರು ಕಾಂಕ್ರೀಟ್ ತಡೆ ಗೋಡೆಯ ಕಾಮಗಾರಿಯನ್ನು ಪರಿಶೀಲಿದಾಗ ಕಬ್ಬಿಣದ ಬಳಕೆ, ಜೆಲ್ಲಿ ಹಾಗೂ ಸಿಮೆಂಟಿನ ಸರಿಯಾದ ಮಿಶ್ರಣವಿಲ್ಲದೆ ಕಲ್ಲು ಹುಡಿಯನ್ನು ಬಳಸಿ ತಡೆಗೋಡೆ ಗೋಡೆ ನಿರ್ಮಾಣ ಮಾಡಿರುವುದು ಗೋಚರಿಸಿತು.
ಕಾಂಕ್ರೀಟ್ ಸರಿಯಾದ ಮಿಶ್ರಣವಿಲ್ಲದೆ ತಡೆಗೋಡೆ ನಿರ್ಮಿಸಿದ್ದರ ಪರಿಣಾಮ ನಿರ್ಮಾಣದ ಹಂತದಲ್ಲೇ ಕುಸಿದಿದೆ. ಜೊತೆಗೆ ರಸ್ತೆ ಬದಿಯ ಅಪಾಯಕಾರಿ ಬರೆಯನ್ನು ಕೊರೆದು ತೆಗೆಯಲಾಗಿದ್ದು, ಬರೆಗಳೆಲ್ಲ ಅಪಾಯಕಾರಿಯಾಗಿವೆ ಎಂದು ನಿವೃತ್ತ ಇಂಜಿನಿಯರ್ ಬಿದ್ದಂಡ ಮಾದಯ್ಯ ಆರೋಪಿಸಿದರು.
ಈ ಸಂಬಂಧ ಗ್ರಾಮಸ್ಥರು ಚರ್ಚಿಸಿ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ದೂರು ನೀಡಿ ಕಾನೂನು ರೀತಿಯಲ್ಲಿ ಹೋರಾಡಲು ತೀರ್ಮಾನಿಸಲಾಗಿದೆ ಎಂದು ವಕೀಲ ಕಡೇಮಾಡ ವಿನ್ಸಿ ಅಪ್ಪಯ್ಯ ಹೇಳಿದರು.
ಕಳಪೆ ಕಾಮಗಾರಿಯಿಂದ ಭವಿಷ್ಯದಲ್ಲಿ ದೊಡ್ಡ ಅನಾಹುತ ಸಂಭವಿಸುತ್ತದೆ ಎಂದು ಸ್ಥಳೀಯರಾದ ಕೊಂಗೇಟಿರ ಬೋಪಯ್ಯ ಕಳವಳ ವ್ಯಕ್ತಪಡಿಸಿದರು.
ಕಳೆದ ಬಾರಿಯ ಮಳೆಯಿಂದಾಗಿ ಇಲ್ಲಿನ ಬರೆಗಳು ಕುಸಿದಿವೆ. 12ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಗಟ್ಟಿಯಾಗಿ ಅಡಿಪಾಯವನ್ನು ಹಾಕದೆ ತಡೆಗೋಡೆಯನ್ನು ನಿರ್ಮಿಸಿದ್ದಲ್ಲದೆ, ತೀರಾ ಕಳಪೆ ಗುಣಮಟ್ಟದ ತಡೆಗೋಡೆ ನಿರ್ಮಿಸಿ ನಿರ್ಮಾಣದ ಹಂತದಲ್ಲೇ ಕುಸಿದಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ಪಪ್ಪು ತಿಮ್ಮಯ್ಯ ಆಗ್ರಹಿಸಿದರು.
ಈ ಸಂದರ್ಭ ಸ್ಥಳೀಯರಾದ ಸೋಮಯಂಡ ದಿಲೀಪ್ ಅಪ್ಪಚ್ಚು, ಬಿದ್ದಂಡ ಅಚ್ಚಯ್ಯ, ಪೇರಿಯನ ಜಯಾನಂದ, ಜಯಂತ್, ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಮಧುಸೂದನ್, ವಿಜಯ, ಅಜೀಜ್ ಮತ್ತಿತರರು ಹಾಜರಿದ್ದರು.