Saturday, December 9, 2023

Latest Posts

ನಾರಾಯಣಗುರುಗಳ ವಿವಾದವನ್ನು ಇಲ್ಲಿಗೇ ಕೊನೆಗಾಣಿಸಿ: ಹರಿಕೃಷ್ಣ ಬಂಟ್ವಾಳ್

ಹೊಸದಿಗಂತ ವರದಿ, ಮಂಗಳೂರು:

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ದಚಿತ್ರಕ್ಕೆ ಕೇಂದ್ರ ಸರಕಾರ ಅವಕಾಶ ನೀಡಿಲ್ಲ ಎಂಬ ವಿವಾದ ಕೇರಳ ಕಮ್ಯುನಿಸ್ಟ್ ಪಕ್ಷದ ಕುತಂತ್ರವಾಗಿದೆ. ಈ ವಿವಾದದ ಬೆಂಕಿಗೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ತುಪ್ಪ ಸುರಿಯುತ್ತಿದ್ದಾರೆ. ನಾರಾಯಣಗುರುಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವುದನ್ನು ನಾವು ಒಪ್ಪುವುದಿಲ್ಲ. ಈ ವಿವಾದವನ್ನು ಇಲ್ಲಿಗೇ ಕೊನೆಗಾಣಿಸಬೇಕು. ವಿವಾದವನ್ನು ಕೆಣಕಿದರೆ ನಾವು ಬಿಡುವುದಿಲ್ಲ ಎಂದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದರು.
ಈ ವಿವಾದ ಸೃಷ್ಟಿಯಿಂದ ಹಲವರ ಮುಖವಾಡ ಬಯಲಾಗಿದೆ. ಈ ವಿವಾದ ಸೃಷ್ಟಿಯಾಗಿದ್ದು, ನಾರಾಯಣಗುರಗಳ ಕೇಂದ್ರ ಸ್ಥಳ ಶಿವಗಿರಿಯಿಂದ ಅಲ್ಲ. ಬದಲವಾಗಿ ಕುತಂತ್ರಿ ಕಮ್ಯುನಿಸ್ಟರ ಗರ್ಭಗುಡಿಯಿಂದ ಹಾಗೂ ಅತಂತ್ರ, ಪರತಂತ್ರ ಕಾಂಗ್ರೆಸ್‌ನ ಷಡ್ಯಂತ್ರದಿಂದ.
ಕಾಂಗ್ರೆಸ್ ಪಕ್ಷಕ್ಕೆ ಧಮ್ ಇದ್ದಲ್ಲಿ ಕೇಂದ್ರ ಸರಕಾರ ನಾರಾಯಣ ಗುರುಗಳ ಸ್ತಬ್ಧ ಚಿತ್ರದ ಬದಲಿಗೆ ಶಂಕಾರಾಚಾರ್ಯರ ಸ್ತಬ್ಧಚಿತ್ರವನ್ನು ಮಾಡುವಂತೆ ಹೇಳಿದ್ದರ ಲಿಖಿತ ಪ್ರತಿಯನ್ನು ತೋರಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಇಷ್ಟು ವರ್ಷ ಕಾಂಗ್ರೆಸ್ ಯಾಕೆ ಪರೇಡ್‌ಗೆ ನಾರಾಯಣಗುರುಗಳ ಸ್ತಬ್ದಚಿತ್ರ ಮಾಡಿಲ್ಲ? ಗುರುಗಳು ಅಲ್ಲದಿದ್ದರೆ, ಹಿಂದು ಸಮಾಜ ಇಂದು ಮತಾಂತರಕ್ಕೆ ತುತ್ತಾಗುತ್ತಿತ್ತು ಎಂದು ಕಾಂಗ್ರೆಸಿಗರು ಈಗ ಹೇಳುತ್ತಿದ್ದಾರೆ. ಆದರೆ, ಅದೇ ಕಾಂಗ್ರೆಸಿಗರು ಮತಾಂತರ ನಿಷೇಧ ಮಸೂದೆ ವಿರೋಧಿಸಿದ್ದಾರೆ. ಕಾಂಗ್ರೆಸ್‌ನ ಅಸ್ತಿತ್ವ ಮುಗಿಯುತ್ತಾ ಬಂದಿರುವ ಕಾರಣ ಇದೀಗ ನಾರಾಯಣಗುರುಗಳನ್ನು ಮುಂದಿಟ್ಟು ರಾಜಕೀಯ ಮಾಡಿ ಮತ ಗಿಟ್ಟಿಸುವ ಯತ್ನವನ್ನು ಮಾಡುತ್ತಿದೆ. ಆದರೆ ಆ ಕಾರ್ಯಕ್ಕೆ ನಾರಾಯಣ ಗುರುಗಳೇ ಬೆಂಕಿ ಹಾಕುತ್ತಾರೆ. ಹಿಂದೆ ಲಿಂಗಾಯಿತ ಸಮುದಾಯ ಒಡೆಯಲು ಹೋದಾಗ ಕಾಂಗ್ರೆಸ್‌ಗೆ ಅದೇ ಪರಿಸ್ಥಿತಿ ಆಗಿದೆ. ಇದೀಗ ನಾರಾಯಣ ಗುರುಗಳೇ ಕಾಂಗ್ರೆಸನ್ನು ಸುಡಲಿದ್ದಾರೆ ಎಂದರು.
ಅಂದು ಸಿದ್ದರಾಮಯ್ಯ, ಅಮೀನ್ ಮಟ್ಟು ಮಾಡಿದ್ದು ಅವಮಾನವಲ್ಲವೇ?
2016 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರು ಮಂಗಳೂರಿಗೆ ಭೇಟಿ ನೀಡಿದಾಗ ಜನಾರ್ದನ ಪೂಜಾರಿಯವರು ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಸಿದ್ದರಾಮಯ್ಯ ಅವರಿಗಾಗಿ ಪೂಜಾರಿ ಅವರು ನಾಲ್ಕು ಗಂಟೆ ಕಾದಿದ್ದರು. ಆದರೆ ಅಂದು ಸಿದ್ಧರಾಮಯ್ಯ ಅವರು ನಾರಾಯಣಗುರುಗಳು ಸ್ಥಾಪಿಸಿದ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸದೇ ಐವನ್ ಡಿಸೋಜ ಅವರ ಮನೆಯಲ್ಲಿ ಹಂದಿ ಮಾಂಸ ತಿಂದು, ಕೆಂಪು ನೀರು ಕುಡಿದು ವಾಪಾಸ್ ಹೋಗಿದ್ದರು. ಆ ಸಂದರ್ಭ ಜನಾರ್ದನ ಪೂಜಾರಿಯವರು ಸಿದ್ಧರಾಮಯ್ಯಗೆ ನಾರಾಯಣ ಗುರುಗಳು ಬುದ್ಧಿ ಕಲಿಸುತ್ತಾರೆ ಎಂದಿದ್ದರು. ಅಂದು ಸಿದ್ಧರಾಮಯ್ಯ ಕುದ್ರೋಳಿ ಕ್ಷೇತ್ರಕ್ಕೆ ಮಾಡಿದ್ದು ಅವಮಾನವಲ್ಲವೇ? ಸಿದ್ದರಾಮಯ್ಯ ಅವರ ಮಾಧ್ಯಮದ ಪ್ರಮುಖರಾಗಿದ್ದ ದಿನೇಶ್ ಅಮೀನ್ ಮಟ್ಟು ಅವರು ಕುದ್ರೋಳಿ ಕ್ಷೇತ್ರವನ್ನು ‘ಜನಾರ್ದನ ಪೂಜಾರಿಯವರು ನಾರಾಯಣ ಗುರುಗಳಿಗೆ ಕಟ್ಟಿದ ಗೋರಿ’ ಎಂದು ಹೇಳಿದ್ದರು. ಲೇಡಿಹಿಲ್ ವೃತ್ತಕ್ಕೆ ನಾರಾಯಣಗುರುಗಳ ಹೆಸರನ್ನು ಮನಪಾ ಸಭೆಯಲ್ಲಿ ನಿರ್ಣಯಿಸಿದಾಗ ಕಾಂಗ್ರೆಸ್‌ನ ನಾಯಕರು ಆಕ್ಷೇಪಿಸಿದ್ದರು. ಆವಾಗ ನಾರಾಯಣ ಗುರುಗಳಿಗೆ ಅವಮಾನ ಆಗಿಲ್ಲವೇ? ಎಂದು ಹರಿಕೃಷ್ಣ ಬಂಟ್ವಾಳ್ ಪ್ರಶ್ನಿಸಿದರು.
ಗುರುಗಳ ಸ್ತಬ್ದಚಿತ್ರ ಮೆರವಣಿಗೆಗೆ ಬೆಂಬಲ
ಜನಾರ್ದನ ಪೂಜಾರಿ ಅವರ ನೇತೃತ್ವದ ಜ.26ರ ನಾರಾಯಣಗುರುಗಳ ಸ್ತಬ್ಧಚಿತ್ರ ಮೆರವಣಿಗೆಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ಆದರೆ ಮೆರವಣಿಗೆ ಜಾತಿ, ಮತ, ಪಕ್ಷ ಮೀರಿ ನಡೆಯಬೇಕು. ನಾರಾಯಣ ಗುರುಗಳ ಬಾವುಟ ಮಾತ್ರ ಹಾರಾಡಬೇಕು. ಪೂಜಾರಿಯವರು ಇಂದಿರಾ ಕಾಲದಿಂದ ರಾಜಕೀಯದಲ್ಲಿದ್ದವರು. ಆಗಿನಿಂದಲೂ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಪೆರೇಡ್‌ಗೆ ಕೊಂಡೊಯ್ಯಲು ಆಗಿಲ್ಲ. ಹಾಗಾಗಿ ಇದೀಗ ಯಾರೋ ಕುಮ್ಮಕ್ಕು ನೀಡಿ ಅವರನ್ನು ಈ ಮೆರವಣಿಗೆಗೆ ಪ್ರೇರೇಪಿಸಿದ್ದಾರೆ ಎಂದರು.
2023ಕ್ಕೆ ರಾಜ್ಯದಿಂದ ಗುರುಗಳ ಸ್ತಬ್ದಚಿತ್ರ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಈಗಾಗಲೇ ಮಾತುಕತೆ ನಡೆದಿದ್ದು, 2023 ಕ್ಕೆ ರಾಜ್ಯದಿಂದ ಗಣರಾಜ್ಯೋತ್ಸವ ಪೆರೇಡ್‌ಗೆ ನಾರಾಯಣಗುರುಗಳ ಸ್ತಬ್ಧಚಿತ್ರ ಕಳುಹಿಸುವ ನಿರ್ಣಯಕ್ಕೆ ಬಂದಿದ್ದಾರೆ. ಇಂದೇ ಹೋಗಿ ಪೆರೇಡ್‌ನಲ್ಲಿ ಅವಕಾಶ ನೀಡಬೇಕೆಂದರೆ ಅದು ದಸರಾ ಕಾರ್ಯಕ್ರಮ ಅಲ್ಲ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರರಾದ ರವಿಶಂಕರ ಮಿಜಾರು, ಜಗದೀಶ ಶೇಣವ, ರಾಧಾಕೃಷ್ಣ, ಜಿಲ್ಲಾ ಮಾಧ್ಯಮ ಸಂಚಾಲಕ ಸಂದೇಶ್ ಕುಮಾರ್ ಶೆಟ್ಟಿ, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!