ಹೊಸದಿಗಂತ ವರದಿ, ವಿಜಯನಗರ:
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಲಕ್ಷಾಂತರ ಭಕ್ತರ ಮಧ್ಯೆ ಶುಕ್ರವಾರ ಸಂಜೆ ಸಂಭ್ರಮದಿಂದ ನೆರವೇರಿತು.
ಬಾಳೆಹಣ್ಣು, ಉತ್ತತ್ತಿ, ಹೂಗಳನ್ನು ಎಸೆದು ಭಕ್ತರು ಭಕ್ತಿ ಸಮರ್ಪಿಸಿದರು. ಮೂಲ ಸ್ಥಳದಿಂದ ರಥೋತ್ಸವ ಮುಂದೆ ಸಾಗುತ್ತಿದ್ದಂತೆ ಲಕ್ಷಾಂತರ ಭಕ್ತರ ಜಯಘೋಷಗಳು ಮೊಳಗಿದವು. ಜಾತ್ರೆ ಹಾಗೂ ರಥೋತ್ಸವ ನಿಮಿತ್ತ
ಶುಕ್ರವಾರ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ, ಪಂಚಾಮೃತಾಭಿಷೇಕ, ಮಹಾ ನೈವೇದ್ಯ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ಜರುಗಿದವು. ಸಂಜೆ ಸ್ವಾಮಿಯನ್ನು ದೇವಸ್ಥಾನದಿಂದ ರಥದವರಗೆ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮೂರು ಸುತ್ತು ರಥಕ್ಕೆ ಪ್ರದಕ್ಷಿಣೆ ಹಾಕಿ ನಂತರ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ನೆರೆದ ಲಕ್ಷಾಂತರ ಭಕ್ತ ಮಧ್ಯೆ ರಥೋತ್ಸವ ನಡೆಯಿತು.