ಹೊಸದಿಗಂತ ವರದಿ ಅಂಕೋಲಾ
ಜಾಗತಿಕ ಭಯೋತ್ಪಾದಕ ಅಲ್ ಜವಾಹಿರಿ ರಾಜ್ಯದ ಹಿಜಾಬ್ ವಿಷಯದಲ್ಲಿ ಹೇಳಿಕೆ ನೀಡಿದಾಗ ಅದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುವ ತಾಕತ್ತು ಕಾಂಗ್ರೆಸ್ಸಿಗೆ ಯಾಕಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ನಿದ್ದೆ ಮಾತ್ರೆ ತೆಗೆದುಕೊಂಡು ಗಾಢ ನಿದ್ದೆಗೆ ಜಾರಿದ್ದೇಕೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಪ್ರಶ್ನೆ ಮಾಡಿದ್ದಾರೆ.
ಅವರು ಭಾನುವಾರ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು. ಅಲ್ ಖೈದಾ ಮುಖ್ಯಸ್ಥನಿಗೆ ಭಾರತದ ಆಂತರಿಕ ವಿಷಯದಲ್ಲಿ ಕೆಲಸ ಏನಿದೆ. ಈತ ಮಂಡ್ಯದ ಮುಸ್ಕಾನ್ ಎಂಬ ವಿದ್ಯಾರ್ಥಿನಿಯನ್ನು ಹಿಜಾಬ್ ವಿಷಯದಲ್ಲಿ ಸಮರ್ಥಿಸಿ ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಸವಾಲು ಹಾಕಿದ್ದಾನೆ. ಈ ಬಗ್ಗೆ ಕಾಂಗ್ರೆಸ್ ಜಾಣ ಕುರುಡು ಪ್ರದರ್ಶಿಸಿದೆ. ಆದರೆ ಭಟ್ಕಳದಲ್ಲಿ ಕಾಂಗ್ರೆಸ್ ಪಕ್ಷ ಗೃಹ ಸಚಿವರ ವಿರುದ್ಧ ದೂರು ದಾಖಲಿಸಲು ಹೊರಟಿದೆ. ಈ ಮೂಲಕ ಶಾಂತವಿದ್ದ ಭಟ್ಕಳಕ್ಕೆ ಬೆಂಕಿ ಹಚ್ಚುವ ಹುನ್ನಾರ ನಡೆಸಿದೆ ಎಂದು ಆರೋಪ ಮಾಡಿದರು.
ಮಾತೆತ್ತಿದರೆ ಸಂವಿಧಾನ, ಅಂಬೇಡ್ಕರ ಎನ್ನುವ ಕಾಂಗ್ರೆಸ್ ಪಕ್ಷ ಈಗ ಅದೇ ಸಂವಿಧಾನವನ್ನು ಪ್ರತಿನಿಧಿಸುವ ನ್ಯಾಯಾಲಯ ಹಿಜಾಬ್ ವಿಷಯದಲ್ಲಿ ನೀಡಿರುವ ತೀರ್ಪನ್ನು ಯಾಕೆ ಒಪ್ಪುತ್ತಿಲ್ಲ. ದಿನಕ್ಕೊಂದು ವಿವಾದಿತ ಹೇಳಿಕೆ ನೀಡುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಮುಂದಿರಿಸಿಕೊಂಡು ಕೋಮ ಭಾವನೆ ಕೆರಳಿಸುತ್ತಿರುವುದು ಕಾಂಗ್ರೆಸ್ ಪಕ್ಷವೇ ವಿನ: ಬಿಜೆಪಿಯಲ್ಲ. ಜನ ಇದನ್ನು ತಿಳಿಯದಷ್ಟು ಮೂರ್ಖರಲ್ಲ ಎಂದರು.
ಭಾಜಪಾ ಮಂಡಳಾಧ್ಯಕ್ಷ ಸಂಜಯ ನಾಯಕ, ಎಸ್ಪಿ ಮೋರ್ಚಾ ಅಧ್ಯಕ್ಷ ಮರಳೀಧರ ಬಂಟ್, ಪ್ರಮುಖರಾದ ನಾಗೇಶ ಕಿಣಿ, ರಾಮಚಂದ್ರ ಹೆಗಡೆ ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ