March 22, 2026
Sunday, March 22, 2026
spot_img

ಜಮೀನು ವಿವಾದ: ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ


ಹೊಸದಿಗಂತ ವರದಿ ಮಂಡ್ಯ :

ಅರಣ್ಯ ಇಲಾಖೆಯವರು ಜಮೀನು ವಶಪಡಿಸಿಕೊಂಡಿದ್ದಾರೆಂಬ ಕಾರಣಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲಾಧಿಕಾರಿ ಕಚೇರಿ ಎದುರೇ ನಡೆದಿದೆ.

ಕೆ.ಆರ್. ಪೇಟೆ ತಾಲೂಕು ಮೂಡನಹಳ್ಳಿ ಗ್ರಾಮದ ದೇವೇಗೌಡನ ಮಗ ಮಂಜೇಗೌಡ (50) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದಾನೆ.

ಗ್ರಾಮದಲ್ಲಿ ತನಗಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದ್ದೆಂದು ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳ ವಿರುದ್ದ ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ನಿನ್ನೆ ಸೋಮವಾರ ಮಂಡ್ಯಕ್ಕೆ ಬಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲು ಮುಂದಾಗಿದಾನೆ. ಆದರೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.

ಇದರಿಂದ ಬೇಸತ್ತ ಮಂಜೇಗೌಡ ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಕಾವೇರಿ ಉದ್ಯಾನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿಶ್ಚಯಿಸಿ ಮೊದಲೇ ತಂದಿದ್ದ ಪೆಟ್ರೋಲ್‌ನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ಹೊತ್ತಿ ಉರಿಯುತ್ತಿದ್ದಂತೆ ಬೆಂಕಿಯನ್ನು ಉದ್ಯಾನದ ಪಕ್ಕದಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗಳು ತಕ್ಷಣ ಓಡಿ ಬಂದು ನಲ್ಲಿಯಲ್ಲಿ ಬರುತ್ತಿದ್ದ ನೀರನ್ನು ಆತನ ಮೈಮೇಲೆ ಎರಚಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಧಾವಿಸಿ ಆ್ಯಂಬುಲೆನ್ಸ್‌ ಮೂಲಕ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !