ಹೊಸ ದಿಗಂತ ಡಿಜಿಟಲ್ ಡೆಸ್ಕ್
ರಷ್ಯದಿಂದ ಭಾರತ ಇಂಧನ ಖರೀದಿಸಬಾರದು ಎಂಬ ಅಭಿಪ್ರಾಯ ರೂಪಿಸುವುದಕ್ಕೆ ಪ್ರಯತ್ನಿಸುತ್ತಿರುವ ಅಮೆರಿಕ, ಇದೇ ರಷ್ಯದಿಂದ ಮತ್ತೊಂದು ಬಗೆಯ ‘ಇಂಧನ’ವನ್ನು ಮುಲಾಜಿಲ್ಲದೇ ಆಮದು ಮಾಡಿಕೊಳ್ಳುತ್ತಿದೆ. ಅದುವೇ ಯುರೇನಿಯಂ.
ಅಮೆರಿಕದ ಚಿಂತಕ ವರ್ಗ ಹಾಗೂ ಅಲ್ಲಿನ ರಾಜನೀತಿ ರಷ್ಯ ವಿಷಯಕ್ಕೆ ಸಂಬಂಧಿಸಿ ಭಾರತದ ಮೇಲೆ ಒತ್ತಡ ತರುವುದಕ್ಕೆ ಪ್ರಯತ್ನಿಸಿಕೊಂಡೇ ಇದೆ. ಭಾರತವು ರಷ್ಯದಿಂದ ಇಂಧನ ತರಿಸಿಕೊಳ್ಳಬಾರದು, ರಷ್ಯ ಜತೆ ವ್ಯವಹಾರ ಕಡಿತಗೊಳಿಸಬೇಕು ಎಂಬೆಲ್ಲ ಒತ್ತಾಯಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬರುತ್ತಲೇ ಇರುತ್ತವೆ.
ನಮಗೆ ನಮ್ಮ ಇಂಧನ ಹಿತಾಸಕ್ತಿಯೇ ಮುಖ್ಯ, ಅದಲ್ಲದೇ ಯುರೋಪ್ ಇನ್ನೂ ರಷ್ಯ ಇಂಧನದ ದೊಡ್ಡ ಅವಲಂಬನೆಯಲ್ಲಿರುವಾಗ ಭಾರತದ ಚಿಕ್ಕಮಟ್ಟದ ಚೌಕಾಶಿ ಖರೀದಿಯನ್ನು ಪ್ರಶ್ನಿಸುವ ನೈತಿಕತೆ ಪಾಶ್ಚಾತ್ಯ ಜಗತ್ತಿಗಿಲ್ಲ ಎಂಬಂಶವನ್ನು ವಿದೇಶ ಸಚಿವ ಎಸ್ ಜೈಶಂಕರ್ ಅವರಂತೂ ತುಂಬ ಖಡಕ್ ಆಗಿಯೇ ಹೇಳಿದ್ದಾರೆ.
ಆದರೆ, ಇದೇ ಅಮೆರಿಕದ ಇನ್ನೊಂದು ಬೂಟಾಟಿಕೆ ಮುಖವೆಂದರೆ, ತಾನು ರಷ್ಯಕ್ಕೆ ನಿರ್ಬಂಧ ವಿಧಿಸಿದಾಗ ಆ ಪಟ್ಟಿಯಿಂದ ಯುರೇನಿಯಂ ಅನ್ನು ಹೊರಗಿರಿಸಿಕೊಂಡಿತು. ಏಕೆಂದರೆ ಯುರೇನಿಯಂಗಾಗಿ ಅಮೆರಿಕವು ದೊಡ್ಡ ಅವಲಂಬನೆ ಇರಿಸಿಕೊಂಡಿರುವುದು ರಷ್ಯದ ಮೇಲೆ. 2020ರಲ್ಲಿ ಅಮೆರಿಕದ ಅಗತ್ಯದ ಯುರೇನಿಯಂನಲ್ಲಿ ಶೇಕಡ 16 ಬಂದಿದ್ದು ರಷ್ಯಾದಿಂದಲೇ. ಉಳಿದಂತೆ ಕೆನಡಾ ಮತ್ತು ಕಜಕಸ್ತಾನಗಳು ಅಮೆರಿಕದ ಯುರೇನಿಯಂ ಆಮದಿನ ದೊಡ್ಡ ಮೂಲಗಳು. ಇವೆರಡೂ ಅಮೆರಿಕದ ಬೇಡಿಕೆಯ ಶೇಕಡ 22ನ್ನು ಪೂರೈಸುತ್ತವೆ.
ತನ್ನ ‘ಇಂಧನ ಭದ್ರತೆ’ಗೆ ಮಾತ್ರ ರಷ್ಯ ಅವಲಂಬನೆ ತಪ್ಪಲ್ಲ, ಭಾರತ ಮಾತ್ರ ಅತ್ತ ನೋಡಬಾರದು ಎಂಬುದು ಅದ್ಯಾವ ತರ್ಕ?