ಆಯುಷ್ ಸುತ್ತ ಭಾರತಕ್ಕೆ ಲಾಭವಾಗುವಂತೆ ಉದ್ಯಮ ಹೇಗೆ ಕಟ್ಟಬಹುದೆಂಬ ನೀಲನಕ್ಷೆ ಹರವಿಟ್ಟ ಪ್ರಧಾನಿ ನರೇಂದ್ರ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಮಂಗಳವಾರವಷ್ಟೇ ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರವನ್ನು ಉದ್ಘಾಟಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಬುಧವಾರ ಗುಜರಾತ್‌ನ ಗಾಂಧಿನಗರದಲ್ಲಿ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಸಾಂಪ್ರದಾಯಿಕ ಔಷಧಗಳಲ್ಲಿ ಭಾರತದ ಜಾಗತಿಕ ಪ್ರಯಾಣಕ್ಕೆ ಬೇಕಾದ ದೊಡ್ಡ ಕಾರ್ಯಸೂಚಿಯೊಂದಕ್ಕೆ ಮೋದಿ ಸರ್ಕಾರ ಚಾಲನೆ ನೀಡಿದಂತಾಗಿದೆ.

ಇದೇ ಮೋದಲ ಬಾರಿಗೆ ಆಯುಷ್ ವಿಭಾಗದಲ್ಲಿ (ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ) ಈ ಮಟ್ಟದ ಜಾಗತಿಕ ಹೂಡಿಕೆ ಸಮಾವೇಶವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯುಷ್ ಬೆಳೆಯುತ್ತಿರುವ ರೀತಿ ಹಾಗೂ ಇದರ ಸುತ್ತ ಹಲವರಿಗೆ ಅನುಕೂಲವಾಗುವಂತೆ ಉದ್ಯಮ ಕಟ್ಟಲಿಕ್ಕಿರುವ ಅವಕಾಶವನ್ನು ವಿವರಿಸಿದ್ದಾರೆ.

ಅವರು ಹೇಳಿದ ಪ್ರಮುಖಾಂಶಗಳು ಹೀಗಿವೆ

  • ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್‌ ಗಿಡಮೂಲಿಕೆಗಳು ಹೆಚ್ಚು ಸಹಕಾರಿ. ಕೋವಿಡ್ ಸಂದರ್ಭದಲ್ಲಿ ಆಯುರ್ವೇದದ ಕಷಾಯ ಜನರಲ್ಲಿ ರೋಗನಿರೋಧಕತೆ ಹೆಚ್ಚಿಸುವುದಕ್ಕೆ ಸಹಾಯ ಮಾಡಿತು. ಅರಿಶಿನದ ರಫ್ತು ಹಲವು ಪಟ್ಟು ಹೆಚ್ಚಾಗಿದೆ.
  • ಈ ವರ್ಷ 14 ಸ್ಟಾರ್ಟಪ್‌ಗಳು ಯುನಿಕಾರ್ನ್ ಕ್ಲಬ್‌ಗೆ ಸೇರ್ಪಡೆಗೊಂಡಿವೆ. ಆಯುಷ್ ಸ್ಟಾರ್ಟ್‌ಅಪ್‌ ಸಹ ಶೀಘ್ರದಲ್ಲೇ ಕ್ಲಬ್‌ಗೆ ಸೇರಲಿದೆ.
  • ಔಷಧೀಯ ಸಸ್ಯಗಳನ್ನು ಬೆಳೆಯುವ ರೈತರಿಗೆ ಅಂತರ್ಜಾಲದ ಮೂಲಕ ನೇರ ಮಾರುಕಟ್ಟೆ ಸಂಪರ್ಕ ಕಲ್ಪಿಸಲಿದ್ದೇವೆ. ಇದು ರೈತರ ಆದಾಯವೃದ್ಧಿಗೂ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ 50ಕ್ಕೂ ಹೆಚ್ಚು ದೇಶಗಳ ಸಂಸ್ಥೆಯ ಜತೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ.
  • ಮುಂದಿನ 25 ವರ್ಷಗಳು ಭಾರತದ ಸಾಂಪ್ರದಾಯಿಕ ಔಷಧಗಳ ಜಾಗತಿಕ ಔನ್ನತ್ಯದ ಕಾಲವಾಗಲಿದೆ ಎಂಬ ಬಗ್ಗೆ ಯಾವ ಅನುಮಾನವೂ ಬೇಡ.
  • ಭಾರತವು ಅದಾಗಲೇ ಮೆಡಿಕಲ್ ಪ್ರವಾಸೋದ್ಯಮ ತಾಣವಾಗಿ ಮಾರ್ಪಟ್ಟಿದೆ. ಕೇರಳದ ಪ್ರವಾಸೋದ್ಯಮಕ್ಕೆ ಅಲ್ಲಿನ ಸಾಂಪ್ರದಾಯಿಕ ಔಷಧ ಸೇವೆಗಳ ಕೊಡುಗೆ ದೊಡ್ಡದು. ಇದನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸಬೇಕಿದೆ. ಹೀಲ್ ಇನ್ ಇಂಡಿಯಾ- ಭಾರತಕ್ಕೆ ಬಂದು ಗುಣವಾಗಿ ಎಂಬ ಅಭಿಯಾನವನ್ನು ರೂಪಿಸುವುದಕ್ಕೆ ಅವಕಾಶವಿದೆ.
  • ಭಾರತದಲ್ಲಿ ತಯಾರಿಸಲಾದ ಅತ್ಯುನ್ನತ ಗುಣಮಟ್ಟದ ಆಯುಷ್ ಉತ್ಪನ್ನಗಳಿಗೆ ಟ್ರೇಡ್‌ ಮಾರ್ಕ್‌ ರೂಪಿಸಲು ಯೋಜನೆ
  • ಆಯುಷ್ ಚಿಕಿತ್ಸೆಯ ಲಾಭ ಪಡೆಯಲು ಭಾರತಕ್ಕೆ ಬರುವ ವಿದೇಶಿ ಪ್ರಜೆಗಳಿಗೆ ವಿಶೇಷ ಆಯುಷ್ ವೀಸಾ ವರ್ಗವನ್ನು ಪರಿಚಯ ಮಾಡಲಾಗುವುದು.

ಆಯುಷ್‌ ಶೃಂಗಸಭೆಯಲ್ಲಿ ಡಬ್ಲ್ಯುಎಚ್‌ಒ ಡಿಜಿ ಡಾ ಟೆಡ್ರೊಸ್, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!