ಮೈಸೂರಿನ ಅಸ್ಮಿತೆ ಉಳಿದಿರುವುದೇ ಪಾರಂಪರಿಕ ಕಟ್ಟಡಗಳಲ್ಲಿ: ಯದುವೀರ್

ಹೊಸದಿಗಂತ ವರದಿ ಮೈಸೂರು: 

ನೂರು ವರ್ಷ ಆಗಿದೆ ಎಂದು ಮೈಸೂರಿನಲ್ಲಿ ನಿರ್ಮಿಸಲಾಗಿರುವ ಪಾರಂಪರಿಕ ಕಟ್ಟಡಗಳನ್ನು ನೆಲಸಮಗೊಳಿಸುವುದು ಸರಿಯಲ್ಲ, ಈ ಪಾರಂಪರಿಕ ಕಟ್ಟಡಗಳಿಂದಲೇ ಮೈಸೂರಿನ ಅಸ್ಮಿತೆ ಉಳಿದಿರುವುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ಮೈಸೂರಿನ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್ಡೌನ್, ದೇವರಾಜ ಮಾರುಕಟ್ಟೆಯನ್ನು ಉಳಿಸುವ ನಿಟ್ಟಿನಲ್ಲಿ ಹೊಸ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದರು.

ಮೈಸೂರಿನ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ ಸ್ಟೋನ್ ಕಟ್ಟಡ ನೆಲಸಮಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರ ವಿರೋಧಿಸಿ ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದಿಂದ ಬುಧವಾರ ಚಿಕ್ಕಗಡಿಯಾರದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು.

ಮೈಸೂರಿನ ಹೃದಯ ಭಾಗದಲ್ಲಿರುವ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆ,ಲ್ಯಾನ್ ಸ್ಟೋನ್ ಕಟ್ಟಡ ನೆಲಸಮ ಮಾಡಿ, ಅದೇ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡುವುದಕ್ಕೆ ಕ್ಕೆ ಸರ್ಕಾರ ಮುಂದಾಗಿರುವುದು ಸರಿಯಲ್ಲ, ದೇವರಾಜ ಮಾರುಕಟ್ಟೆ ಮೈಸೂರಿನ ಪ್ರತಿಯೊಬ್ಬರ ಹೃದಯಕ್ಕೂ ಹತ್ತಿರವಾಗಿದೆ. ಈ ಮಾರುಕಟ್ಟೆಯನ್ನು ಸಂರಕ್ಷಿಸಬಹುದು ಎಂದು ತಜ್ಞರೇ ಹೇಳಿದ್ದಾರೆ. ಹಾಗಾಗಿ ಪಾರಂಪರಿಕ ಕಟ್ಟಡಗಳನ್ನು ರಕ್ಷಿಸಬೇಕು. ಅಭಿವೃದ್ಧಿ ನೆಪದಲ್ಲಿ ಐತಿಹಾಸಿಕ ಕಟ್ಟಡಗಳ ನೆಲಸಮ ಬೇಡ ಎಂದು ಒತ್ತಾಯಿಸಿದರು.
ನಮ್ಮ ಪೂರ್ವಜರು ಕಟ್ಟಿದ ಪಾರಂಪರಿಕ ಕಟ್ಟಡಗಳನ್ನ ನೋಡಿ ನಾವು ಬೆಳೆದಿದ್ದೇವೆ. ಇದೇ ನಮ್ಮ ಮೈಸೂರಿನ ಕಲೆ, ಇದನ್ನೇ ನಮ್ಮ ಮುಂದಿನ ಪೀಳಿಗೆಗೆ ಕೊಡಬೇಕಿದೆ. ಈ ಪರಂಪರೆಯನ್ನ ಕಾಪಾಡದಿದ್ರೆ ಮೈಸೂರಿನ ಐಡೆಂಟಿಟಿ ಉಳಿಯಲ್ಲ. ಮೈಸೂರಿನ ನಾಗರೀಕ ಸಮುದಾಯ ಆರಂಭವಾಗಿದ್ದು ದೇವರಾಜ ಮಾರುಕಟ್ಟೆಯಿಂದ. ಹಾಗಾಗಿ ಜನರ ಅಭಿಪ್ರಾಯಗಳಿಗೆ, ಭಾವನಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ ಎಂದರು. ಪಾರಂಪರಿಕ ಸಮಿತಿಯಲ್ಲಿ ಯಾರು ಇರಬೇಕಿತ್ತೋ ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಸಿ ಅನುಮೋದನೆ ಪಡೆಯಲಾಗಿದೆ. ಪಾರಂಪರಿಕ ಕಟ್ಟಡಗಳ ಉಳಿವಿಗೆ ಸದಾ ನನ್ನ ಬೆಂಬಲ ಇರುತ್ತೆ. ನೂರಕ್ಕೆನೂರು ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದರು.
ನೂರು ವರ್ಷವಾಗಿದೆ ಎಂದು ಅರಮನೆ ಕೆಡವಲು ಸಾಧ್ಯವೇ..?
ಮೈಸೂರಿನ ವಿಶ್ವವಿಖ್ಯಾತ ಅಂಬಾ ವಿಲಾಸ ಅರಮನೆಯನ್ನು ಕಟ್ಟಿ 100 ವರ್ಷದ ಮೇಲಾಗಿದೆ ಎಂದು ಅರಮನೆ ಕೆಡವಿ, ಬೇರೆ ಕಟ್ಟಲು ಆಗುತ್ತಾ.? ಮೈಸೂರಿನ ಸಂಸ್ಕೃತಿ ಪಾರಂಪರಿಕ ಕಟ್ಟಡಗಳ ಜೊತೆ ಬೆರೆತಿದೆ. ನೂರು ವರ್ಷ ಆಗಿದೆ ಎಂದು ಕಟ್ಟಡಗಳನ್ನು ಹೊಡೆಯುತ್ತಾ ಹೋದರೆ, ಪಾರಂಪರಿಕತೆ ಉಳಿಯುತ್ತಾ? ಒಂದು ಪಾರಂಪರಿಕ ಕಟ್ಟಡ ಕೆಡವಿದ ಮೇಲೆ ಅದೇ ಮಾದರಿಯಲ್ಲಿ ಕಟ್ಟಿದರೂ ಕೂಡಾ ಆ ಕಟ್ಟಡಕ್ಕೆ ಹಳೇ ಇತಿಹಾಸ ಬರುವುದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪಾರಂಪರಿಕ ಕಟ್ಟಡ ಉಳಿಸುವ ಹೊಸ ತಜ್ಞರ ಸಮಿತಿ ರಚನೆ ಮಾಡಬೇಕು. ಜನರ ಅಭಿಪ್ರಾಯಗಳಿಗೆ, ಭಾವನಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ ಎಂದರು.
ನಮ್ಮ ವಂಶದ ಖಾಸಗಿ ಆಸ್ತಿಗಳ ನವೀಕರಣ ಅದು ಬೇರೆ ವಿಚಾರ. ಆದರೆ ಸಾರ್ವಜನಿಕರ ಸ್ವತ್ತಿನ ಕಟ್ಟಡಗಳದ್ದು ಬೇರೆಯ ವಿಚಾರ. ಅರಮನೆಯ ಆಸ್ತಿಯ ವಿಚಾರಕ್ಕೂ ಸಾರ್ವಜನಿಕರ ಸ್ವತ್ತಿನ ಪಾರಂಪರಿಕ ಕಟ್ಟಡಗಳಿಗೂ ಸಂಬಂಧ ಕಲ್ಪಿಸಬೇಡಿ. ದೇವರಾಜ ಮಾರುಕಟ್ಟೆ ನಮ್ಮ ವ್ಯಾಪ್ತಿಗೆ ಕೊಟ್ಟರೆ, ನಾವೇ ಪುನಶ್ಚೇತನ ಮಾಡುತ್ತೇವೆಂದು ರಾಜ ಮಾತೆ ಪ್ರಮೋದಾದೇವಿ ಒಡೆಯರ್ ಹೇಳಿರುವುದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಅದನ್ನ ಅವರ ಬಳಿಯೇ ಕೇಳಿ. ನಾನು ಅದಕ್ಕೆ ಪ್ರತಿಕ್ರಿಯಿಸಲ್ಲ ಎಂದು ಯದುವೀರ್ ತಿಳಿಸಿದರು.
ರಾಜ್ಯದಲ್ಲಿ ಕೋಮುಸಂಘರ್ಷ ನಿಲ್ಲಿಸಿ, ಎಲ್ಲರಿಗೂ ಕೈಮುಗಿದು ಬೇಡುತ್ತೇನೆ ಶಾಂತಿಯಿಂದ ಹೋಗಿ ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!