ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2ʼ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಅಬ್ಬರಕ್ಕೆ ಬಾಕ್ಸ್ ಆಫೀಸ್ ದಾಖಲೆಗಳು ಧೂಳೀಪಟವಾಗುತ್ತಿದೆ.
ಚಿತ್ರದ ಜನಪ್ರಿಯತೆಯು ಇದೀಗ ಇಂಗ್ಲಿಷ್ ಪ್ರೀಮಿಯರ್ ಲೀಗ್ ದೈತ್ಯ ತಂಡವಾದ ಮ್ಯಾಂಚೆಸ್ಟರ್ ಸಿಟಿಯ ಗಮನವನ್ನು ಸೆಳೆದಿದೆ.
ಅತ್ಯಂತ ಯಶಸ್ವಿ ಫುಟ್ಬಾಲ್ ಕ್ಲಬ್ಗಳಲ್ಲಿ ಒಂದಾದ ಮ್ಯಾಂಚೆಸ್ಟರ್ ಸಿಟಿ ತಂಡವು ಅಭಿಮಾನಿಗಳಿಗಾಗಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಕೆಜಿಎಫ್ ಚಿತ್ರಕ್ಕೆ ಗೌರವ ಸಲ್ಲಿಸಿದೆ.
ಮ್ಯಾಂಚೆಸ್ಟರ್ ನಗರವನ್ನು ಪ್ರತಿನಿಧಿಸುವ ಕ್ಲಬ್ ತನ್ನ ಮೂವರು ಸ್ಟಾರ್ ಆಟಗಾರರಿರುವ ಫೋಟೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ಕೆವಿನ್ ಡಿ ಬ್ರೂಯ್ನೆ, ಇಲ್ಕೇ ಗುಂಡೋಗನ್ ಮತ್ತು ಫಿಲ್ ಫೋಡೆನ್ ಇದ್ದು, ಈ ಮೂವರನ್ನು “ನಮ್ಮ ಕೆಜಿಎಫ್!” ಎಂದು ಒಕ್ಕಣೆ ಬರೆದುಕೊಂಡಿದೆ. ಆ ಮೂವರ ಹೆಸರುಗಳ ಆರಂಭಿಕ ಅಕ್ಷರಗಳನ್ನು ತೆಗೆದುಕೊಂಡು ‘ಕೆಜಿಎಫ್’ ಎಂದು ಬ್ರಾಂಡ್ ಮಾಡಲಾಗಿದೆ.
ಜಾಗತೀಕವಾಗಿ ಕೋಟ್ಯಾಂತರ ಅಭಿಮಾನಿಗಳ ಮೆಚ್ಚಿನ ತಂಡವಾಗಿರುವ ಮ್ಯಾಂಚೆಸ್ಟರ್ ಸಿಟಿ ತಂಡದ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಪೊಸ್ಟ್ ಮೆಚ್ಚಿರುವ ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಈ ಫೋಸ್ಟ್ ಬಾಲಿವುಡ್ ನಿರ್ಮಾಪಕ-ನಟ ಫರ್ಹಾನ್ ಅಖ್ತರ್ ಅವರ ಗಮನವನ್ನೂ ಸೆಳೆದಿದೆ. ಈ ಫೊಸ್ಟ್ ಮೆಚ್ಚಿಕೊಂಡಿರುವ ಅವರು “ಅದ್ಭುತ” ಎಂದು ಎಂದು ತಮ್ಮ ಇಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಮ್ಯಾಂಚೆಸ್ಟರ್ ಸಿಟಿಯ ಹಾರ್ಡ್ಕೋರ್ ಅಭಿಮಾನಿಗಳಲ್ಲಿ ಫರ್ಹಾನ್ ಅಖ್ತರ್ ಕೂಡ ಒಬ್ಬರು. ಕೆಜಿಎಫ್ ಚಿತ್ರವು ವಿಶ್ವಾದ್ಯಂತ ತನ್ನ ಅಬ್ಬರ ಮುಂದವರೆಸಿದ್ದು ಬಿಡುಗಡೆಯಾದ ಒಂದೇ ವಾರದಲ್ಲಿ 650 ಕೋಟಿಗಿಂತಲೂ ಹೆಚ್ಚಿನ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.