ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೇಟರ್ ನೋಯ್ಡಾ ಪ್ರದೇಶದಲ್ಲಿರುವ ಶಾರದಾ ವಿಶ್ವವಿದ್ಯಾಲಯದ ಪರೀಕ್ಷೆಯೊಂದರಲ್ಲಿ ಹಿಂದುತ್ವ ಮತ್ತು ಫ್ಯಾಸಿಸಂ ನಡುವಿನ ಸಾಮ್ಯತೆಗಳ ಕುರಿತು ಪರೀಕ್ಷೆಯಲ್ಲಿ “ಆಕ್ಷೇಪಾರ್ಹ” ಪ್ರಶ್ನೆಗಳಖನ್ನು ಕೇಳಲಾಗಿದ್ದು ಈ ಕುರಿತು ಯುಜಿಸಿಯು ಶಾರದಾ ವಿವಿಯಿಂದ ವರದಿ ಕೆಳಿದೆ.
ಪ್ರಥಮ ವರ್ಷದ ಬಿ.ಎ. ಪರೀಕ್ಷೆಯ ರಾಜ್ಯ ಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆಯಲ್ಲಿ “ಫ್ಯಾಸಿಸಂ/ನಾಜಿಸಂ ಮತ್ತು ಹಿಂದೂ ಬಲಪಂಥೀಯ (ಹಿಂದುತ್ವ) ನಡುವೆ ಏನಾದರೂ ಹೋಲಿಕೆಗಳನ್ನು ನೀವು ಕಂಡುಕೊಂಡಿದ್ದೀರಾ? ವಾದಗಳೊಂದಿಗೆ ವಿವರಿಸಿ.” ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಅನೇಕ ಹಿಂದೂ ವಿದ್ಯಾರ್ಥಿಗಳು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಉತ್ತರವನ್ನು ಕೊಡಲು ನಿರಾಕರಿಸಿದ್ದರು. ಇದು ಅನೇಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಹಾಗು ಹಲವರು ಯುಜಿಸಿಗೆ ಈ ಕುರಿತು ದೂರು ನೀಡಿದ್ದರು.
ಈ ಕುರಿತು ಶಾರದಾ ವಿವಿಗೆ ನೋಟಿಸ್ ನೀಡಿರುವ ಯುಜಿಸಿ “ನಿಮ್ಮ (ಶಾರದಾ ವಿವಿ) ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆಗಳಲ್ಲಿ ಹಿಂದುತ್ವ ಮತ್ತು ಫ್ಯಾಸಿಸಂಗಳ ನಡುವಿನ ಸಾಮ್ಯತೆಗಳ ಕುರಿತಾಗಿ ಪ್ರಶ್ನೆಕೇಳಿರುವ ಕುರಿತು ಅನೇಕ ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ನಮ್ಮ ದೇಶದ ಪರಂಪರೆ ಮತ್ತು ನೈತಿಕತೆಗೆ ವಿರುದ್ಧವಾಗಿದೆ. ವಿಶ್ವವಿದ್ಯಾನಿಲಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತೆಗೆದುಕೊಂಡ ಕ್ರಮಗಳು ಹಾಗೂ ವಿಷಯದ ಬಗ್ಗೆ ಕ್ರಮ ತೆಗೆದುಕೊಂಡ ವಿವರವಾದ ವರದಿಯನ್ನು ಸಲ್ಲಿಸಲು ವಿಶ್ವವಿದ್ಯಾಲಯವನ್ನು ಕೋರಲಾಗಿದೆ” ಎಂದು ಸೂಚಿಸಿದೆ.
ಪ್ರಶ್ನೆ ಪತ್ರಿಕೆಯು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆದ ನಂತರ, ವಿಶ್ವವಿದ್ಯಾನಿಲಯವು “ಪ್ರಶ್ನೆಗಳಲ್ಲಿ ಪಕ್ಷಪಾತದ ಸಾಧ್ಯತೆಯನ್ನು ಪರಿಶೀಲಿಸಲು” ಮೂರು ಸದಸ್ಯರ ಸಮಿತಿಯನ್ನು ರಚಿಸಿತು. ಸಮಿತಿಯು ಪ್ರಶ್ನೆಯನ್ನು ಆಕ್ಷೇಪಾರ್ಹವೆಂದು ಕಂಡುಹಿಡಿದಿದೆ ಮತ್ತು ಮೌಲ್ಯಮಾಪನದ ಉದ್ದೇಶಕ್ಕಾಗಿ ಅದನ್ನು ಮೌಲ್ಯಮಾಪಕರು ನಿರ್ಲಕ್ಷಿಸಬಹುದು ಎಂದು ಹೇಳಿದೆ.
ವಿಶ್ವವಿದ್ಯಾನಿಲಯವು ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿದ ಅಧ್ಯಾಪಕರಿಗೆ ಶೋಕಾಸ್ ನೋಟಿಸ್ ಸಹ ನೀಡಿದೆ.