ಸಿ-ಡಿ ವರ್ಗದ ಸರಕಾರಿ ಜಮೀನು ಹಿಂಪಡೆಯಲು ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ: ಶಾಸಕ ಬೋಪಯ್ಯ

ಹೊಸ ದಿಗಂತ ವರದಿ, ಮಡಿಕೇರಿ:

ಅರಣ್ಯ ಇಲಾಖೆಗೆ ನಿರ್ಬಂಧಗಳೊಂದಿಗೆ ಹಸ್ತಾಂತರವಾಗಿರುವ ಸಿ ಮತ್ತು ಡಿ ದರ್ಜೆಯ ಸರ್ಕಾರಿ ಜಾಗವನ್ನು ಹಿಂದಕ್ಕೆ ಪಡೆಯುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುವುದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.
ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಬೆಳೆಗಾರರ ಸಮಾವೇಶ’ದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, 1993-94 ನೇ ಸಾಲಿನಲ್ಲಿ ಕೊಡಗಿನ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು, ಅಗತ್ಯ ಸಂದರ್ಭಗಳಲ್ಲಿ ಯಾವಾಗ ಬೇಕಾದರೂ ಹಿಂದಕ್ಕೆ ಪಡೆಯುವ ಅವಕಾಶದೊಂದಿಗೆ ಅರಣ್ಯ ಇಲಾಖೆಗೆ ನೀಡಲಾಗಿತ್ತು. ಹೀಗಿದ್ದೂ ಆ ನಂತರದ ದಿನಗಳಲ್ಲಿ ಸಿ ಮತ್ತು ಡಿ ದರ್ಜೆಯ ಜಾಗದ ದಾಖಲೆಗಳಲ್ಲಿ ಎಲ್ಲಿಯೂ ಇಲ್ಲದ ‘ಫಾರೆಸ್ಟ್ ಪೈಸಾರಿ’ ಎನ್ನುವ ಅಂಶ ಸೇರ್ಪಡೆಯಾಗಿದೆಯೆಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಸಿ ಮತ್ತು ಡಿ ದರ್ಜೆಯ ಜಾಗದ ಒಡೆತನ ಕಂದಾಯ ಇಲಾಖೆಯ ಬಳಿಯಲ್ಲೇ ಇರಬೇಕೆಂದು ಪ್ರತಿಪಾದಿಸಿದರು.

ಸಕ್ರಮ ಅವಶ್ಯ
ಜಿಲ್ಲೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಕಾಫಿ ಕೃಷಿ ನಡೆಸುತ್ತಿರುವ ಹಲವಾರು ಬೆಳೆಗಾರರು ಫಾರಂ ನಂ.50,53 ಮತ್ತು 57 ರಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈ ಹಿಂದಿನ ಕಂದಾಯ ಅಧಿಕಾರಿಗಳು ಕಾಫಿ ಕೃಷಿಯ ಜಾಗವನ್ನು ಸಕ್ರಮ ಮಾಡಲಾಗುವುದಿಲ್ಲವೆಂದು ಅರ್ಜಿಯನ್ನು ವಿಲೇವಾರಿ ಮಾಡಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, 5 ಎಕರೆ ಒಳಗಿನ ಒತ್ತುವರಿಯನ್ನು ಸಕ್ರಮಗೊಳಿಸಬೇಕು ಮತ್ತು ಎಸಿ ಕಛೇರಿ ಮುಂದೆ ಇರುವ ಇಂತಹ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಅಭಿಪ್ರಾಯಿಸಿದರು.

ಪೌತಿ ಖಾತೆ -ಪಟ್ಟೆದಾರರ ಸಮಸ್ಯೆ
ಕೊಡಗಿನ ಭೂ ಹಿಡುವಳಿಗಳ ದಾಖಲೆಗಳಲ್ಲಿನ ಪೌತಿ ಖಾತೆ ಮತ್ತು ಪಟ್ಟೆದಾರರ ಸಮಸ್ಯೆ ಬಗೆಹರಿಸಬೇಕಾಗಿದೆ. ಇಲ್ಲಿಯವರೆಗೆ ವೈಯಕ್ತಿಕ ಖಾತೆ ಇಲ್ಲದಿದ್ದರೂ ಬೆಳೆಗಾರರಿಗೆ ಸರ್ಕಾರದ ಸೌಲಭ್ಯವನ್ನು ಒದಗಿಸುವ ಕೆಲಸವಾಗಿದ್ದು, ಬೆಳೆಗಾರರಿಗೆ 35 ಕೋಟಿಯಷ್ಟು ಬೆಳೆ ಪರಿಹಾವನ್ನು ವಿತರಿಸಲಾಗಿದೆ. ಆದರೆ, ಈ ವರ್ಷದಿಂದ ವೈಯಕ್ತಿಕ ಪಹಣಿ ಇಲ್ಲದ ಬೆಳೆಗಾರರಿಗೆ ಸರ್ಕಾರದ ಸೌಲಭ್ಯ ದೊರಕುವುದಿಲ್ಲ. ಈ ಹಿನ್ನೆಲೆಯಲ್ಲಿ ಸಮಸ್ಯ ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು, ಬೆಳೆಗಾರರು ತಾಳ್ಮೆ ಕಳೆದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಎಚ್ಚರಿಸಿದರು.

ವಿಶೇಷ ಅಧಿಕಾರಿ ನೇಮಿಸಿ
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಜಿಲ್ಲೆಯ ‘ಪೋಡಿ’ ಪ್ರಕರಣ ಗಳ ಇತ್ಯರ್ಥಕ್ಕೆ ವಿಶೇಷ ಉಪ ವಿಭಾಗಾಧಿಕಾರಿಗಳನ್ನು ನೇಮಕ ಮಾಡುವಂತೆ ಕಂದಾಯ ಸಚಿವರನ್ನು ಒತ್ತಾಯಿಸಿದರು.

ಸಂವಾದ
ಸಮಾವೇಶದಲ್ಲಿ ನಡೆದ ಸಂವಾದದಲ್ಲಿ ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವಂತೆ, ಜಮ್ಮಾ ಜಾಗದ ಸಮಸ್ಯೆ ಬಗೆಹರಿಸಿ ಜಾಗದ ಹಕ್ಕುದಾರಿಕೆಯನ್ನು ಭೂ ಹಿಡುವಳಿದಾರರಿಗೆ ನೀಡಬೇಕು, ಗುತ್ತಿಗೆ ಆಧಾರದಲ್ಲಿ ಪೈಸಾರಿ ಜಾಗ ನೀಡುವ ಸಂದರ್ಭ ಮಾಜಿ ಸೈನಿಕರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು, ಬಾಣೆ ಜಾಗದ ಹಕ್ಕುದಾರಿಕೆ ನೀಡಲು ಕ್ರಮ ಕೈಗೊಳ್ಳಬೇಕು,ಆರ್‍ಟಿಸಿಯಲ್ಲಿನ ಪಿ1 . ಪಿ2 ಎನ್ನುವುದನ್ನು ತೆಗೆಸಲು ಹೋಬಳಿ ಮಟ್ಟದಲ್ಲಿ ಉಪ ವಿಭಾಗಾಧಿಕಾರಿಗಳು ಕಂದಾಯ ಅದಾಲತ್ ನಡೆಸಬೇಕು ಎಂಬಿತ್ಯಾದಿ ಬೇಡಿಕೆಗಳ ಅಹವಾಲುಗಳನ್ನು ಬೆಳೆಗಾರರು ಕಂದಾಯ ಸಚಿವರ ಮುಂದಿಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!