ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತೀಯರು ಸ್ವಾತಂತ್ರ್ಯಕ್ಕೆ ಪಟ್ಟ ಪರಿಶ್ರಮ, ಸತತ ಹೋರಾಟಗಳಿಗೆ ಮಿಡಿದು ಕೆಲ ವಿದೇಶಿಗರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಪ್ರತಿಮ ಕೊಡುಗೆ ನೀಡಿದ್ದಾರೆ. ಅಂತಹ ಮಹನೀಯರಲ್ಲಿ ಅಮೆರಿಕನ್ ಮಹಿಳೆ ಆಗ್ನೆಸ್ ಸ್ಮೆಡ್ಲಿ ಸ್ಮರಣೀಯರು. 1892ರ ಫೆಬ್ರವರಿ 23 ರಂದು ಅಮೆರಿಕದ ಮಿಸೌರಿಯ ಓಸ್‌ಗುಡ್‌ನಲ್ಲಿ ಜನಿಸಿದ ಅಗ್ನೆಸ್ ಶಿಕ್ಷಕಿಯಾಗಿ ವೃತ್ತಿಜೀವನ ಆರಂಭಿಸಿದರು. ಬಳಿಕ ವಿದ್ಯಾರ್ಥಿ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. 1912 ರಲ್ಲಿ ಕ್ಯಾಂಪಸ್ ಪತ್ರಿಕೆಯ ಸಂಪಾದಕಿಯಾಗಿ ನೇಮಕಗೊಂಡರು. ಅಮೆರಿಕದಲ್ಲಿ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದ ಅಗ್ನೆಸ್ ಭಾರತೀಯ ಕ್ರಾಂತಿಕಾರಿಗಳಾದ ಎಂ.ಎನ್. ರಾಯ್, ಮತ್ತು ವೀರೇಂದ್ರ ನಾಥ್ ಚಟ್ಟೋಪಾಧ್ಯಾಯ ಅವರ ಸಂಪರ್ಕಕ್ಕೆ ಬಂದ ಬಳಿಕ ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಚಳವಳಿಗಳ ಬಗ್ಗೆ ತಿಳಿದುಕೊಂಡರು.
ಅಲ್ಲಿಂದಾಚೆಗೆ ಅಗ್ನೇಸ್ ಭಾರತೀಯ ಹೋರಾಟಗಾರರಿಗೆ ಎಲ್ಲಾ ರೀತಿಯ ನೆರವು ನೀಡಲು ನಿರ್ಧರಿಸಿದರು. ಲಾಲಾ ಲಜಪತ್ ರಾಯ್ ಅವರ ನಿರ್ದೇಶನದ ಮೇರೆಗೆ ಜರ್ಮನಿಗೆ ತೆರಳಿದ ಅಗ್ನೆಸ್ ಅಲ್ಲಿದ್ದ ಭಾರತೀಯ ಕ್ರಾಂತಿಕಾರಿಗಳಿಗೆ ಎಲ್ಲಾ ರೀತಿಯ ನೆರವು ನೀಡಲಾರಂಭಿಸಿದರು. ಭಾರತದ ಬ್ರಿಟಿಷ್ ಆಳ್ವಿಕೆಯ ವಿರುದ್ಧ ದಂಗೆ ಪ್ರಚೋದಿಸುತ್ತಿದ್ದಾರೆ ಎಂದು ಅಗ್ನೆಸ್ ವಿರುದ್ಧ ಆರೋಪ ಹೊರಿಸಿ 1918 ರಲ್ಲಿ ಬೇಹುಗಾರಿಕೆ ಕಾಯ್ದೆಯಡಿ ಆಕೆಯನ್ನು ನ್ಯೂಯಾರ್ಕ್ ನಲ್ಲಿ ಬಂಧಿಸಲಾಯಿತು. ಜೈಲಿನಿಂದ ಬಿಡುಗಡೆಯಾದ ಬಳಿಕ 1919 ರಲ್ಲಿ ರಾಬರ್ಟ್ ಮೋರ್ಸ್ ಲೊವೆಟ್, ನಾರ್ಮನ್ ಥಾಮಸ್ ಮತ್ತು ರೋಜರ್ ಬಾಲ್ಡ್ವಿನ್ ಅವರ ಜೊತೆಗೂಡಿ ʼಫ್ರೆಂಡ್ಸ್ ಆಫ್ ಫ್ರೀಡಮ್ ಫಾರ್ ಇಂಡಿಯಾʼ ಪುಸ್ತಕವನ್ನು ರಚಿಸಿದರು. ಅಗ್ನೇಸ್ 1950 ರ ಮೇ 6ರಂದು ಲಂಡನ್‌ನಲ್ಲಿ ನಿಧನರಾದರು. ಭಾರತದ ಸ್ವಾತಂತ್ರ್ಯಕ್ಕಾಗಿ ಆಕೆ ನೀಡಿದ ಕೊಡುಗೆಗಳಿಗೆ ಸದಾ ಸ್ಮರಣೀಯರಾಗಿದ್ದಾರೆ.
ಆಕೆಯ ಆತ್ಮಕಥೆ ಡಾಟರ್ ಆಫ್ ದಿ ಅರ್ಥ್ ವಿಶ್ವವಿಖ್ಯಾತವಾಗಿದೆ. ಹಿಂದಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ