ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯಿಂದಾಗಿ ಸೋಮವಾರ ಸ್ಥಗಿತಗೊಂಡಿದ್ದ ಬದರಿನಾಥ ಧಾಮಕ್ಕೆ ಯಾತ್ರಾರ್ಥಿಗಳ ಸಂಚಾರ ಇಂದು ಬೆಳಗ್ಗೆ ಪುನರಾರಂಭಗೊಂಡಿದೆ. ಹವಾಮಾನ ಪ್ರಯಾಣಕ್ಕೆ ಅನುಕೂಲವಾದ ಕೂಡಲೇ ಇಂದು ಬೆಳಗ್ಗೆ 115 ವಾಹನಗಳು ಬದರಿನಾಥ ಧಾಮದಿಂದ ಹೊರಟಿವೆ. ಬದರಿನಾಥ ಧಾಮಕ್ಕೆ ಮತ್ತೆ ಪ್ರಯಾಣಿಕರ ಸಂಚಾರ ಪ್ರಾರಂಭವಾಗಿದೆ ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಮಂಗಳವಾರ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬದರಿನಾಥ ರಾಷ್ಟ್ರೀಯ ಹೆದ್ದಾರಿಯ ಹನುಮಾನ್ ಚಾಟ್ಟಿಯ ಮುಂದೆ ಬಲ್ಡೋಡಾದಲ್ಲಿ ಬಂಡೆಯಿಂದ ಕಲ್ಲುಗಳು ಬಿದ್ದಿದ್ದರಿಂದ ಮತ್ತು ಲಂಬಗಡ ಚರಂಡಿಯಲ್ಲಿ ನೀರು ಹೆಚ್ಚಾದ ಕಾರಣ ಪ್ರಯಾಣಿಕರ ಸಂಚಾರವನ್ನು ನಿಷೇಧಿಸಲಾಗಿತ್ತು. ಬದರಿನಾಥ ಧಾಮಕ್ಕೆ ಹೋಗುವ ಯಾತ್ರಾರ್ಥಿಗಳನ್ನು ಪಿಪಾಲ್‌ಕೋಟಿ, ಚಮೋಲಿ, ನಂದಪ್ರಯಾಗ, ಕರ್ಣಪ್ರಯಾಗ ಮತ್ತು ಗೌಚಾರ್, ಗೋವಿಂದಘಾಟ್‌ನಲ್ಲಿ ತಡೆಹಿಡಿಯಲಾಗಿತ್ತು. ಯಾತ್ರಾರ್ಥಿಗಳ ವಸತಿ, ಆಹಾರ ಮತ್ತು ನೀರು ಸೇರಿದಂತೆ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ವಾತಾವರಣ ತಿಳಿಯಾದ ಕಾರಣ ಇಂದು ಮತ್ತೆ ಬದರಿನಾಥನ ದರ್ಶನಕ್ಕೆ ಅವಕಾಶ ಕಲ್ಪಸಲಾಗಿದೆ.