ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಮದ್ಯದಂಗಡಿಯೊಂದರ ಮೇಲೆ ಶಂಕಿತ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ವೈನ್ ಶಾಪ್ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದು ಅವರ ಮೂವರು ಸಹೋದ್ಯೋಗಿಗಳು ಗಾಯಗೊಂಡಿದ್ದಾರೆ.
ಮೋಟರ್ ಬೈಕಿನಲ್ಲಿ ಬಂದ ದಾಳಿಕೋರರು ಏಕಾಏಕಿ ವೈನ್ ಶಾಪ್‌ನ ಮೇಲೆ ಗ್ರೆನೇಡ್ ಎಸೆದು ಪರಾರಿಯಾಗಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಸಾವನ್ನಪ್ಪಿದ ವ್ಯಕ್ತಿಯನ್ನು ಬಕ್ರ ರಾಜೌರಿಯ ರಂಜಿತ್ ಸಿಂಗ್ ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಕಥುವಾದ ಗೋವರ್ಧನ್ ಸಿಂಗ್ ಮತ್ತು ರವಿಕುಮಾರ್ ಮತ್ತು ಕಂಗ್ರಾ ರಾಜೌರಿಯ ಗೋವಿಂದ್ ಸಿಂಗ್ ಎಂದು ಗುರುತಿಸಲಾಗಿದೆ. ಗೋವಿಂದ್ ಸಿಂಗ್ ರವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೋಲೀಸ್ ಮೂಲಗಳು ಹೇಳಿವೆ.
ಇತ್ತೀಚೆಗೆ ಶ್ರಿನಗರದ ಹೊರಭಾಗದಲ್ಲಿ ವೈನ್ ಶಾಪ್ ತೆರೆಯಲು ಜಮ್ಮು ಕಾಶ್ಮೀರ ಸರ್ಕಾರವು ಪರವಾನಿಗೆ ನೀಡಿತ್ತು. ಆದರೆ ಇದನ್ನು ಧಾರ್ಮಿಕ ಪಕ್ಷಗಳು ಮತ್ತು ಕೆಲವು ಸ್ಥಳೀಯರು ತೀವ್ರವಾಗಿ ವಿರೋಧಿಸಿದ್ದರು. ಜನರ ಭಾವನೆಗಳಿಗೆ ಧಕ್ಕೆಯಾಗುವುದನ್ನು ತಪ್ಪಿಸಲು ವೈನ್ ಶಾಪನ್ನು ಸ್ಥಳಾಂತರಿಸಲು ಜಮ್ಮು ಕಾಶ್ಮೀರದ ಬಿಜೆಪಿ ಘಟಕ ಆಗ್ರಹಿಸಿತ್ತು.