ಶುಶ್ರೂಷಕರ‌‌ ಸೇವೆಯ ಅರಿವಾಗಿದ್ದು ಕೋವಿಡ್ ಸಂದರ್ಭದಲ್ಲಿ :ಡಾ.ಕಾರ್ಯಪ್ಪ

ಹೊಸದಿಗಂತ ವರದಿ ಮಡಿಕೇರಿ:

ಶುಶ್ರೂಷಕರು ಜೀವರಕ್ಷಕರು ಎಂಬ ಮಾತು ಚಾಲ್ತಿಯಲ್ಲಿದ್ದರೂ ಅವರ ಸೇವೆ ಜನರಿಗೆ ನಿಜವಾಗಿ ಅರಿವಾಗಿದ್ದು, ಕೋವಿಡ್ ಎಂಬ ಮಹಾಮರಿಯ ಸಮಯದಲ್ಲಿ ಎಂದು‌ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ.ಕಾರ್ಯಪ್ಪ ಅವರು ಅಭಿಪ್ರಾಯಪಟ್ಟರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವವನ್ನು ತಲ್ಲಣಗೊಳಿಸಿದ್ದ ಕೋವಿಡ್ ನಿಯಂತ್ರಣದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಶುಶ್ರೂಷಕರ ಪಾತ್ರ ಬಹಳ ಹಿರಿಮೆಯದ್ದಾಗಿದೆ. ಆರೋಗ್ಯ ಕ್ಷೇತ್ರದಲ್ಲೂ ಸಹ ಶುಶ್ರೂಷಕರ ಪಾತ್ರ ಬಹಳ ಪ್ರಮುಖವಾಗಿದೆ. ಅವರ ಸಾಂತ್ವನದ ನುಡಿಗಳು ರೋಗಿಗಳ ಬದುಕಿನಲ್ಲಿ ಭರವಸೆಯನ್ನು ತರುತ್ತದೆ. ಯಾವುದೇ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲೂ, ಅತೀ ಒತ್ತಡದ ನಡುವೆಯೂ ತಮ್ಮ ಕಾರ್ಯವನ್ನು ತಾಳ್ಮೆಯಿಂದ ನಿರ್ವಹಿಸುತ್ತಾರೆ. ಇವರು ಉತ್ತಮ ಜ್ಞಾನಿ ಮತ್ತು ವೈವಿಧ್ಯಮಯ ಚಿಕಿತ್ಸಾ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡಿರುತ್ತಾರೆ ಎಂದು ನುಡಿದರು.
ವಿಶ್ವವಿಖ್ಯಾತ ಹೆಸರಾದಂತಹ ಶುಶ್ರೂಷಕಿ ಫ್ಲಾರೆನ್ಸ್ ನೈಟಿಂಗೆಲ್ ಅವರ ಹುಟ್ಟಿದ ದಿನವನ್ನು ಅವರು ಮನುಕುಲಕ್ಕೆ ನೀಡಿದ ಅಮೋಘ ಸೇವೆ ಸ್ಮರಿಸುವ ಸಲುವಾಗಿ ಶುಶ್ರೂಷಕರ‌ ದಿನವನ್ನು ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಶುಶ್ರೂಷಕ ಅಧೀಕ್ಷಕಿ ವೀಣಾ ಅವರು ದೀಪ ಬೆಳಗಿಸಿ ಶುಶ್ರೂಷ ಅಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಹಿರಿಯ ಶುಶ್ರೂಷಕಿ ಮರಿಯಮ್ಮ ವರ್ಗಿಸ್‍ ಫ್ಲಾರೆನ್ಸ್ ನೈಟಿಂಗೆಲ್‍ ಅವರ ಬಗ್ಗೆ ಮತ್ತು ದಿನಾಚರಣೆ ಮಹತ್ವದ ಬಗ್ಗೆ ವಿವರಿಸಿದರು. ಗಿರಿಜಾಮಣಿ ಅವರು ಸ್ವಾಗತಿಸಿದರೆ, ವಿಶಾಲಾಕ್ಷಿ ಅವರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ್, ಆಡಳಿತಾಧಿಕಾರಿ ಲಿಲ್ಲಿ ಉಪಸ್ಥಿತರಿದ್ದರು.
ಕೋವಿಡ್ ಮಹಾಮಾರಿಯ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ಪ್ರತಿಯೊಬ್ಬ ಶುಶ್ರೂಷಕರ ಸೇವೆ ಪರಿಗಣಿಸಿ ಅವರಿಗೆ ಬೆಸ್ಟ್ ನರ್ಸಿಂಗ್ ಆಫಿಸರ್ ಸರ್ಟಿಫಿಕೇಟ್ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!