ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಎರಡು ವಾರಗಳಿಂದ ಜ್ಞಾನವಾಪಿ ಮಸೀದಿಯು ದೇಶದಾದ್ಯಂತ ಚರ್ಚೆಯಲ್ಲಿದೆ. ಮಸೀದಿಯೊಳಗಡೆ ವೀಡಿಯೋಗ್ರಫಿಗೆ ಕೋರ್ಟ್ ಆದೇಶವನ್ನು ವಿರೋದಿಸಿ ಮುಸ್ಲಿಮರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದು ಅವರ ವಾದವನ್ನು ಆಲಿಸುವುದಾಗಿ ಸುಪ್ರಿಂ ಕೋರ್ಟ್ ಹೇಳಿದೆ ಜೊತೆಗೆ ಪತ್ತೆಯಾಗಿದೆಯೆನ್ನಲಾಗಿರುವ ಶಿವಲಿಂಗವನ್ನು ರಕ್ಷಿಸುವಂತೆಯೂ ಹೇಳಿದೆ. ಎರಡೂ ವಾದಿಗಳು ಸುಪ್ರಿಂ ಕೋರ್ಟ್ ವಿಚಾರಣೆಯತ್ತ ದೃಷ್ಟಿ ನೆಟ್ಟಿದ್ದಾರೆ. ಹೀಗೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಈ ಜ್ಞಾನವಾಪಿ ವಿವಾದ ಹುಟ್ಟಿಕೊಂಡಿದ್ದು ಮಾತೆ ಶೃಂಗಾರ ಗೌರಿಯ ಪೂಜೆಗೆ ಅವಕಾಶ ಕೇಳಿಕೊಂಡು ಐವರು ದೇವಿಯ ಭಕ್ತೆಯರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯೊಂದರಿಂದ.
ಆಗಸ್ಟ್ 18, 2021 ರಂದು ಲಕ್ಷ್ಮಿ ದೇವಿ, ರಾಖಿ ಸಿಂಗ್, ಸೀತಾ ಸಾಹು, ಮಂಜು ವ್ಯಾಸ್ ಮತ್ತು ರೇಖಾ ಪಾಠಕ್ ಎಂಬ 5 ಹಿಂದೂ ಮಹಿಳೆಯರು ಜ್ಞಾನವಾಪಿ ಮಸೀದಿಯ ಗೋಡೆಯ ಮೇಲಿರುವ ಶೃಂಗಾರ ಗೌರಿ, ಭಗವಾನ್ ಗಣೇಶ, ಭಗವಾನ್ ಹನುಮಾನ್ ಮತ್ತು ನಂದಿಯನ್ನು ಪೂಜಿಸಲು ಹಾಗೂ ಮಸೀದಿಯೊಳಗಡೆ ಇರುವ ಈ ಪ್ರತಿಮೆಗಳ ಮೇಲೆ ಹಾನಿಯಾಗುವುದನ್ನು ತಪ್ಪಿಸಬೇಕೆಂದು ವಾರಾಣಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರಲ್ಲೊಬ್ಬರಾದ ಸೀತಾ ಸಾಹು ಅವರು ಮೇ 18 ರಂದು ಅವರು ವಿವಾದಿತ ಜ್ಞಾನವಾಪಿ ಕಟ್ಟಡದಲ್ಲಿರುವ ಶೃಂಗಾರ ಗೌರಿಯನ್ನು ನಿಯಮಿತವಾಗಿ ಪೂಜಿಸುತ್ತಿರುವ ಬಗ್ಗೆ ಹಾಗೂ ಸಂಕೀರ್ಣವನ್ನು ಪ್ರವೇಶಿಸಿದ್ದಕ್ಕೆ ಮಸೀದಿಯವರಿಂದ ಕಿರುಕುಳಕ್ಕೊಳಗಾಗಿರುವ ಬಗ್ಗೆ ಬಹಿರಂಗ ಪಡಿಸಿದ್ದರು. ಅವರ ಮಾತುಗಳಲ್ಲೇ ಕೇಳುವುದಾರೆ “ನಾವು ( ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ರೇಖಾ ಪಾಠಕ್) ಮಾತೆ ಶೃಂಗಾರ ಗೌರಿಯನ್ನು ಪೂಜಿಸುತ್ತಿದ್ದೆವು. ನಿಯಮಿತವಾಗಿ ಸ್ಥಳದಲ್ಲಿ ಪೂಜೆ, ಸತ್ಸಂಗಗಳನ್ನು ಮಾಡುತ್ತಿದ್ದರಿಂದ ಎಲ್ಲರ ನಡುವೆ ಸಹಜವಾಗಿಯೇ ಸ್ನೇಹವಿತ್ತು. ನಾವು ನಮ್ಮ ಹಕ್ಕಿನಂತೆ ಪೂಜೆ ಮಾಡಲು ಬಯಸಿದ್ದೆವು. ಆದರೆ ಅವರು (ಮಸೀದಿಯ ಆಡಳಿತ ಮಂಡಳಿ) ಶೃಂಗಾರ ಗೌರಿಯ ಭಕ್ತರಿಗೆ ಕಿರುಕುಳ ನೀಡಲು ಆರಂಭಿಸಿದರು. ಚೈತ್ರ ನವರಾತ್ರಿಯ ಸಂದರ್ಭದಲ್ಲೂ ಕೇವಲ ಒಂದು ಗಂಟೆ ಪೂಜೆ ಮಾಡಲು ಮಾತ್ರ ಅವಕಾಶ ನೀಡಲಾಯಿತು, ಈ ಹಿನ್ನೆಲೆಯಲ್ಲಿ ನಾವೆಲ್ಲರೂ ನಮ್ಮ ಪೂಜೆಯ ಹಕ್ಕಿಗಾಗಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದೆವು”
ಪೂಜೆಯ ಹಕ್ಕು ಪಡೆಯಲು ನಿರ್ಧರಿಸಿದ ಈ ಐವರು ಮಹಿಳೆಯರಿಗೆ ಲಕ್ಷ್ಮಿ ದೇವಿಯರ ಪತಿಯಾದ ಸೋಹನ್ ಲಾಲ್ ಸಹಾಯ ಮಾಡಿದ್ದಾರೆ. ಸೋಹನ್ ಲಾಲ್ ಅವರೇ ವಕೀಲ ಹರಿಶಂಕರ್ ಜೈನ್ ರನ್ನು ಮಹಿಳೆಯರಿಗೆ ಪರಿಚಯಿಸಿದ್ದಾರೆ. ಈ ಮಹಿಳೆಯರಲ್ಲಿ ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಕಾಶಿವಾಸಿಗಳೇ, ವಿವಾದಿತ ಜ್ಞಾನವಾಪಿ ಕಟ್ಟಡದಿಂದ 2 ಕಿ.ಮೀ ವ್ಯಾಸದೊಳಗೆ ಇವರೆಲ್ಲರ ಮನೆಯಿದೆ. ಐದನೇ ಅರ್ಜಿದಾರರಾದ ರೇಖಾಪಾಠಕ್ ರವರು ದೆಹಲಿಯಲ್ಲಿರುತ್ತಾರೆ.
ತಮ್ಮ ಇಷ್ಟ ದೇವರ ಪೂಜೆಯ ಹಕ್ಕನ್ನು ಪಡೆಯಲು ನ್ಯಾಯಾಲಯದ ಮೆಟ್ಟಿಲೇರಿದ ಈ ಐವರು ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಮಸೀದಿಯ ಒಳಗಡೆ ಇರುವ ಶೃಂಗಾರ ಗೌರಿ ಮತ್ತು ಇತರೆಡೆಗಳ ವೀಡಿಯೋಗ್ರಫಿಗೆ ಆದೇಶನೀಡಿತು. ಮುಂದೆ ನಡೆದಿರುವುದು ದೇಶವ್ಯಾಪಿ ಚರ್ಚೆಗೆ ಕಾರಣವಾಯಿತು.