2020ರಲ್ಲಿ ರಸ್ತೆ ಅಪಘಾತದಲ್ಲಿ ಸತ್ತವರ ಸಂಖ್ಯೆಯಲ್ಲಿ ಇಳಿಕೆ, ಲಾಕ್ಡೌನ್ ಪ್ರಭಾವ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2019 ಕ್ಕೆ ಹೋಲಿಸಿದರೆ 2020 ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಗಮನಾರ್ಹವಾದ ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪಘಾತಗಳು ಸರಾಸರಿ ಶೇಕಡಾ 18.46 ರಷ್ಟು ಕಡಿಮೆಯಾಗಿದೆ, ಸಾವನ್ನಪ್ಪಿದವರ ಸಂಖ್ಯೆ ಶೇಕಡಾ 12.84. ಹಾಗೂ ಗಾಯಾಳುಗಳ ಸಂಖ್ಯೆ ಶೇಕಡಾ 22.84 ರಷ್ಟು ಕಡಿಮೆಯಾಗಿದೆ. 2020 ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 3,66,138 ರಸ್ತೆ ಅಪಘಾತಗಳು ವರದಿಯಾಗಿದೆ. ಇದರಲ್ಲಿ 1,31,714 ಜನ ಸಾವನ್ನಪ್ಪಿದ್ದು 3, 48,279ಜನ ಗಾಯಗೊಂಡಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MORTH) ಸಾರಿಗೆ ಸಂಶೋಧನಾ ವಿಭಾಗ (TRW) ಸಿದ್ಧಪಡಿಸಿದ ‘ಭಾರತದಲ್ಲಿ ರಸ್ತೆ ಅಪಘಾತಗಳು – 2020’ ವರದಿಯ ಪ್ರಕಾರ, 2016 ರಿಂದ ರಸ್ತೆ ಅಪಘಾತಗಳ ಸಂಖ್ಯೆಯು ಇಳಿಮುಖವಾಗಿದ್ದು, 2018ರಲ್ಲಿ ಮಾತ್ರ 0.46 ರಷ್ಟು ತುಸು ಹೆಚ್ಚಳ ಕಂಡುಬಂದಿತ್ತು. ಅದನ್ನು ಹೊರತುಪಡಿಸಿ ಸತತ ಎರಡನೇ ವರ್ಷ, 2020 ರಲ್ಲಿ ಕೂಡ ಒಟ್ಟು ರಸ್ತೆ ಅಪಘಾತಗಳ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆ 2015 ರಿಂದ ಕಡಿಮೆಯಾಗಿದೆ. 2020ರಸ್ತೆ ಅಪಘಾತದಲ್ಲಿ ಹೆಚ್ಚು ಗಾಯಗೊಂಡವರು ಯುವಕರೇ ಆಗಿದ್ದಾರೆಂದು ಈ ವರದಿ ಬಿಂಬಿಸಿದೆ. ಸುಮಾರು 18 ವರ್ಷ ಮೇಲ್ಪಟ್ಟ  ಯುವಕರು 2020 ರಲ್ಲಿ 69% ಅಪಘಾತಗಳಿಗೆ ಒಳಗಾಗಿರುವುದಾಗಿ ವರದಿ ತಿಳಿಸಿದೆ.

2020 ರಲ್ಲಿ ರಸ್ತೆ ಅಪಘಾತದಲ್ಲಿ ಗಮನಾರ್ಹವಾದ ಇಳಿಕೆ ಕಂಡ ಪ್ರಮುಖ ರಾಜ್ಯಗಳು ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ. ಇದೇ ವರ್ಷ ರಸ್ತೆ ಅಪಘಾತದ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡ ರಾಜ್ಯಗಳಾಗಿ ತಮಿಳುನಾಡು, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಆಂಧ್ರಪ್ರದೇಶ ಸ್ಥಾನ ಪಡೆದಿವೆ.

ರಸ್ತೆ ಅಪಘಾತದಲ್ಲಿ ಸಾವು-ನೋವು ಇಳಿಕೆಯಾಗಲು ಮುಖ್ಯ ಕಾರಣ ಲಾಕ್‌ ಡೌನ್‌ ಪ್ರಭಾವ ಇರಬಹುದೆಂದು ಹಲವರ ಅಭಿಪ್ರಾಯ. ಕೊರೊನಾ ಸಾಂಕ್ರಾಮಿಕ ರೋಗದಿಂದ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾದ ಕಾರಣ ಜನ ರಸ್ತೆಗಿಳಿಯುವುದು ಕಡಿಮೆಯಾಗಿತ್ತು. ಅದರಲ್ಲೂ ಅಡ್ಡಾದಿಡ್ಡಿ ಪ್ರಯಾಣಿಸುತ್ತಿದ್ದ ಯುವಜನತೆಗೆ ಬ್ರೇಕ್‌ ಹಾಕಿದಂತಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!