ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಯ-ದ್ರಾವಿಡ ಸಿದ್ಧಾಂತವು ಈಗ ಮತ್ತೆ ಚಿಗುರೊಡೆದಿದೆ. ಆರ್ಯರು ಹೊರಗಿನಿಂದ ಬಂದು ಇಲ್ಲಿನ ಮೂಲ ನಿವಾಸಿಗಳ ಮೇಲೆ ಆಕ್ರಮಣ ಮಾಡಿದರು ಎಂದು ಹಲವು ತಥಾಕಥಿತ ರಾಜಕಾರಣಿಗಳು ಆರೋಪಿಸುತ್ತಿದ್ದಾರೆ. ಆ ಮೂಲಕ ಜನಾಂಗೀಯ ಆಧಾರದ ಮೇಲೆ ಸಮಾಜವನ್ನು ಒಡೆಯುವ ಹುನ್ನಾರ ಶುರುವಾಗಿದೆ.
ಆದರೆ ವಾಸ್ತವದಲ್ಲಿ ಗಮನಿಸುವುದಾದರೆ ಆರ್ಯರು ಎಂಬುದೊಂದು ಜನಾಂಗ ಇರುವ ಕುರಿತು ಎಲ್ಲಿಯೂ ಉಲ್ಲೇಖವಿಲ್ಲ. ಅದೊಂದು ಭಾಷಾಹಿನ್ನೆಲೆಯಲ್ಲಿ ಬಳಕೆಯಾದ ಪದ ಎನ್ನಲಾಗುತ್ತದೆ. ಆರ್ಯರು ಹೊರಗಿನಿಂದ ಬಂದು ಇಲ್ಲಿನ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸಿದ್ದರು ಎಂಬುದರ ಕುರಿತು ಎಲ್ಲಿಯೂ ಸಾಕ್ಷ್ಯಗಳಾಗಲೀ ಪುರಾವೆಗಳಾಗಲಿ ಸಿಕ್ಕಿಲ್ಲ ಎಂದು ಸ್ವತಃ ಡಾ. ಬಿ.ಆರ್ ಅಂಬೇಡ್ಕರ್ ರವರೇ ಹೇಳಿದ್ದಾರೆ. ಅವರು ತಮ್ಮ ʼಹೂ ವರ್ ದಿ ಶೂದ್ರಾಸ್ʼ ಎಂಬ ಪುಸ್ತಕದಲ್ಲಿ ಅಂಬೇಡ್ಕರ್ ರವರು ಆರ್ಯ ಜನಾಂಗ ಸಿದ್ಧಾಂತವನ್ನು ತಳ್ಳಿ ಹಾಕಿದ್ದು “ಆರ್ಯರು ಇಲ್ಲಿನ ದಾಸರು ಮತ್ತು ದಸ್ಯರುಗಳ ಮೇಲೆ ಆಕ್ರಮಣ ಮಾಡಿದರು ಎನ್ನಲು ಯಾವುದೇ ಪುರಾವೆಗಳಿಲ್ಲ. ಇವರ ನಡುವಿನ ವ್ಯತ್ಯಾಸವು ಜನಾಂಗೀಯ ವ್ಯತ್ಯಾಸವೆಂದು ತೋರಿಸಲು ಯಾವುದೇ ಆಧಾರವಿಲ್ಲ” ಎಂದು ಉಲ್ಲೇಖಿಸಿದ್ದಾರೆ.
ಅಲ್ಲದೇ “ಪಾಶ್ಚಿಮಾತ್ಯರು ವಿವರಿಸಿದ ಈ ಆರ್ಯನ್ ಸಿದ್ಧಾಂತವನ್ನು ಜನರ ತಲೆಯಲ್ಲಿ ತುಂಬಲಾಗಿದೆ. ಅದನ್ನು ವಿಷಪೂರಿತ ಹಾವಿನಂತೆ ಕೊಲ್ಲಬೇಕು” ಎಂದು ಉಲ್ಲೇಖಿಸಿದ್ದಾರೆ. ಹಾಗೂ “ಈ ಸಿದ್ಧಾಂತವು ಇನ್ನು ಮುಂದೆ ನಿಲ್ಲುವುದಿಲ್ಲ. ಅದನ್ನು ಕಸದ ಬುಟ್ಟಿಗೆ ಎಸೆಯಬೇಕು” ಎಂದು ಬರೆದಿದ್ದಾರೆ.
ಆದರೆ ಸಿದ್ಧರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಕೆಲವು ರಾಜಕಾರಣಿಗಳು ಈ ಆರ್ಯ-ದ್ರಾವಿಡ ಸಿದ್ಧಾಂತವನ್ನು ಅಂಬೇಡ್ಕರ್ ರವರೊಂದಿಗೆ ತಳುಕು ಹಾಕುತ್ತಿದ್ದಾರೆ. ವಾಸ್ತವದಲ್ಲಿ ಅಂಬೇಡ್ಕರ್ ರವರು ಇದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ ಮತ್ತು ಆರ್ಯ ಸಿದ್ಧಾಂತವನ್ನು ಜನರ ಮನಸ್ಸಿನಿಂದ ಕಿತ್ತೊಗೆಯಬೇಕು ಎಂದು ಹೇಳಿದ್ದಾರೆ.