ಅಫ್ಘಾನಿಸ್ತಾನ – ಭಾರತ ದ್ವಿಪಕ್ಷೀಯ ಮಾತುಕತೆ, ಭಯೋತ್ಪಾದನೆಯನ್ನು ಹತ್ತಿಕ್ಕಲು ಸಹಕರಿಸುತ್ತೇವೆಂದ ತಾಲೀಬಾನ್ : ಭಾರತಕ್ಕೆ ವರದಾನವಾಗಲಿದೆಯೇ ಈ ಹೊಸ ಬೆಳವಣಿಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ತನ್ನ ನೆಲದಿಂದ ಮೂರನೇ ದೇಶದ ವಿರುದ್ಧ ಭಯೋತ್ಪಾದನೆ ನಡೆಸುವುದನ್ನು ಹತ್ತಿಕ್ಕುವುದಾಗಿ ತಾಲೀಬಾನ್‌ ಹೇಳಿದೆ.

ಕಳೆದ ವಾರ ಕಾಬೂಲ್‌ ನಲ್ಲಿ ನಡೆದ ಭಾರತ-ಅಪ್ಘನ್‌ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ತಾಲಿಬಾನ್‌ ಉನ್ನತ ನಾಯಕತ್ವವು ಇತರ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದೆ ಎಂದು ಮೂಲಗಳು ವರದಿ ಮಾಡಿವೆ. ತಾಲಿಬಾನ್‌ ಸರ್ಕಾರದ ಆಹ್ವಾನದ ಮೇಲೆ ಜೆಪಿ ಸಿಂಗ್‌ ಅವರ ನೇತೃತ್ವದ ಭಾರತೀಯ ನಿಯೋಗವು ಅಫ್ಘನ್‌ ರಕ್ಷಣಾ ಸಚಿವ ಯಾಕೂಬ್ ಮತ್ತು ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮೂಲಗಳ ಮಾಹಿತಿ ಪ್ರಕಾರ ತಾಲಿಬಾನ್ ನಾಯಕತ್ವವು ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ನಿರ್ದಿಷ್ಟ ಗುಂಪುಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವ ಭರವಸೆ ನೀಡಿರುವುದಲ್ಲದೇ ಅಲ್ ಖೈದಾದ ಭಯೋತ್ಪಾದಕರ ವಿರುದ್ಧವೂ ಭರವಸೆ ನೀಡಿದೆ. ಉನ್ನತ ತಾಲಿಬಾನ್ ನಾಯಕತ್ವವು ಭಾರತದಂತೆ ಭಯೋತ್ಪಾದನೆ ಹತ್ತಿಕ್ಕಲು ಬದ್ಧವಾಗಿರುವುದಾಗಿ ಹೇಳಿದೆ.

ಮೋದಿ ಸರ್ಕಾರವು ಛಿದ್ರಗೊಂಡಿರುವ  ಅಪ್ಘಾನಿಸ್ತಾನಕ್ಕೆ ಮೂಲಸೌಕರ್ಯ ಯೋಜನೆಗಳು ಮತ್ತು ವಿದ್ಯುತ್ ಕೇಂದ್ರಗಳ ಪುನರುಜ್ಜೀವನ ಮುಂತಾದ ಮಾನವೀಯ ನೆರವು ನೀಡುವುದನ್ನು ಮುಂದುವರಿಸಿರುವುದರಿಂದ ಪರಸ್ಪರ ಹಿತಾಸಕ್ತಿಗಳನ್ನು ಗೌರವಿಸುವುದಾಗಿ ತಾಲಿಬಾನ್‌ ಹೇಳಿದೆ ಎನ್ನಲಾಗಿದೆ.

ಈ ಬೆಳವಣಿಗೆಯು ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಭಾರತದ ವ್ಯೂಹಾತ್ಮಕ ಹಿತಾಸಕ್ತಿಗಳಿಗೆ ಪೂರಕವಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!