ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಹನಗಳು ಹಾಗೂ ಕೈಗಾರಿಕೆಗಳಿಂದ ಬರುತ್ತಿರುವ ಹೊಗೆಯಿಂದ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಯುಮಾಲಿನ್ಯದಿಂದಲೇ ಅದೆಷ್ಟೋ ಜನ ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಧೂಮಪಾನ ಮಾಡುವವರ ದೇಹದಲ್ಲಿ ಸೇರುವ ವಿಷವೂ ಕಡಿಮೆಯೇನಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಪ್ರತಿ ವರ್ಷ 70 ದಶಲಕ್ಷಕ್ಕೂ ಹೆಚ್ಚು ಜನರು ವಾಯು ಮಾಲಿನ್ಯದಿಂದ ಸಾಯುತ್ತಾರೆ.
ಇಂತಹ ಮಾಲಿನ್ಯಕಾರಕಗಳನ್ನು ನಮ್ಮ ದೇಹದಿಂದ ಹೊರಹಾಕಬೇಕು ಅಂದರೆ ಉತ್ತಮ ಆಹಾರ ಸೇವನೆ ಅತ್ಯಗತ್ಯ. ನಮ್ಮ ದೇಹದಲ್ಲಿ ಸಂಗ್ರಹವಾಗುವ ವಿಷಕಾರಿ ಅಂಶವನ್ನು ಹೊರಹಾಕಲು ಪ್ರತಿದಿನ ಕ್ಯಾರೆಟ್, ಸೆಲರಿ ಮತ್ತು ಕೊತ್ತಂಬರಿ ಸೊಪ್ಪನ್ನು ತಿನ್ನಬೇಕು ಅಂತಾರೆ ತಜ್ಞರು. ಕ್ಯಾರೆಟ್ ದೇಹದೊಳಗಿನ ಮಾಲಿನ್ಯವನ್ನು ಹೊರಹಾಕುತ್ತದೆ ಎಂಬುದನ್ನು ಅಮೆರಿಕದ ಡೆಲವೇರ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ. ಸಿಗರೇಟಿನ ಹೊಗೆ ಮತ್ತು ವಾಹನಗಳ ಹೊಗೆಯಲ್ಲಿ ಅಕ್ರೊಲಿನ್ ಎಂಬ ರಾಸಾಯನಿಕ ಇರುತ್ತದೆ. ಇದು ಶ್ವಾಸಕೋಶ ಮತ್ತು ಚರ್ಮಕ್ಕೆ ಹಾನಿಯನ್ನುಂಟುಮಾಡುತ್ತದೆ. ಎಪಿಯೇಸಿ ಜಾತಿಗೆ ಸೇರಿದ ಕ್ಯಾರೆಟ್, ಸೆಲರಿ ಮತ್ತು ಕೊತ್ತಂಬರಿ ಸೊಪ್ಪು ಮಾಲಿನ್ಯಕಾರಕಗಳನ್ನು ಕೊಲ್ಲುವ ಪೋಷಕಾಂಶಗಳನ್ನು ಹೊಂದಿವೆ ಎಂದಿದ್ದಾರೆ.