ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಲಂಪಿಕ್ ಚಾಂಪಿಯನ್ ಜಾವೆಲಿನ್ ಪಟು ಭಾರತದ ನೀರಜ್ ಚೋಪ್ರಾ ಮತ್ತೊಂದು ವಿಶೇಷ ದಾಖಲೆ ಬರೆದಿದ್ದಾರೆ.
ಫಿನ್ಲ್ಯಾಂಡ್ ನ ಪಾವೊ ನುರ್ಮಿ ಗೇಮ್ಸ್ 2022ರ ಕಾಂಟಿನೆಂಟಲ್ ಟೂರ್ ಈವೆಂಟ್ನಲ್ಲಿ 89.30 ಮೀ. ಜಾವೆಲಿನ್ ಎಸೆಯುವ ಮೂಲಕ ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ. ಅಲ್ಲದೇ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನಗಳಿಸಿಕೊಟ್ಟಿದ್ದ 87.58 ಮೀಟರ್ಗಿಂತ ದೂರ ಭರ್ಜಿ ಎಸೆಯುವ ಮೂಲಕ ಸಾಧನೆ ಮೆರೆದಿದ್ದಾರೆ. ಆದರೆ ಅಚ್ಚರಿಯೆಂದರೆ ನಿರಜ್ ಗೆ ತೀವ್ರ ಪೈಪೋಟಿ ಎದುರಾಗಿದ್ದು ಬೆಳ್ಳಿಯ ಪದಕಕ್ಕೆ ತೃಪ್ತಿಪಡಬೇಕಾಯ್ತು.
ನೀರಜ್ ಚೋಪ್ರಾ ಒಲಂಪಿಕ್ ಬಳಿಕ ಕಣಕ್ಕಿಳಿದ ಮೊದಲ ಪಂದ್ಯಾವಳಿಯಲ್ಲಿಯೇ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ನೀರಜ್ ಎಸೆದಿರುವ ಥ್ರೋ ಇಲ್ಲಿಯವರೆಗಿನ ವಿಶ್ವದ ಐದನೇ ಅತ್ಯುತ್ತಮ ಥ್ರೋ ಆಗಿದೆ. ಕ್ರೀಡಾಕೂಟದಲ್ಲಿ ಫಿನ್ಲೆಂಡ್ ದೇಶದ ಸ್ಥಳೀಯ ಜಾವೆಲಿನ್ ಪಟು ಓಲಿವರ್ ಹೆಲಂದರ್ 89.83 ಮೀ ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಗ್ರೆನಡಾದ ಆಂಡರ್ಸನ್ ಪೀಟರ್ಸ್ 86.60 ಮೀಟರ್ ಎಸೆದು 3ನೇ ಸ್ಥಾನ ಪಡೆದರು.
ನೀರಜ್ ಚೋಪ್ರಾ ಅವರು ಜೂನ್ 30 ರಂದು ಸ್ಟಾಕ್ಹೋಮ್ ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮೊದಲು ಫಿನ್ಲ್ಯಾಂಡ್ನಲ್ಲಿ ನಡೆಯುವ ಕುರ್ಟೇನ್ ಗೇಮ್ಸ್ನಲ್ಲಿ ಸ್ಪರ್ಧಿಸಲಿದ್ದಾರೆ. ಆಬಳಿಕ ಬರ್ಮಿಂಗ್ಹ್ಯಾಮ್ನ ಕಾಮನ್ವೆಲ್ತ್ ಗೇಮ್ಸ್ ಹಾಗೂ ಓರೆಗಾನ್ನಲ್ಲಿ ಜುಲೈ 15 ರಿಂದ 24 ರವರೆಗೆ ನಡೆಯುವ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ