July 18, 2026
Saturday, July 18, 2026
spot_img

ಸ್ಫೋಟಕ್ಕೂ ಮುನ್ನ ದೆಹಲಿಯಲ್ಲಿ ಸುತ್ತಾಡಿದ್ದ ಕಾರಿನ CCTV ದೃಶ್ಯಾವಳಿ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸ್ಫೋಟಗೊಂಡು ಒಂಬತ್ತು ಜನರ ಸಾವಿಗೆ ಕಾರಣವಾದ ಬಿಳಿ ಬಣ್ಣದ ಹುಂಡೈ i20 ಕಾರು ಓಡಾಡಿದ್ದ ಸಿಸಿಟಿವಿ ದೃಶ್ಯಾವಳಿಗಳು ಪತ್ತೆಯಾಗಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಂಪುಕೋಟೆ ಮೆಟ್ರೊ ನಿಲ್ದಾಣದ ಸಮೀಪದ ಟ್ರಾಫಿಕ್ ಸಿಗ್ನಲ್‌ನಲ್ಲಿ ಸೋಮವಾರ ಸಂಜೆ 6.50ರ ಹೊತ್ತಿಗೆ ಹುಂಡೈ ಐ–20 ಕಾರು ಸ್ಫೋಟಗೊಂಡಿತ್ತು. ಸ್ಫೋಟಕ್ಕೆ ಕಾರಣವಾದ ಕಾರನ್ನು ಪುಲ್ವಾಮಾ ನಿವಾಸಿ, ವೈದ್ಯ ಉಮರ್ ಮೊಹಮ್ಮದ್ ಕಾರನ್ನು ಚಲಾಯಿಸುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಇದೀಗ ಕಾರು ಚಲಾಯಿಸಿದ್ದ ವ್ಯಕ್ತಿಯ ಸಿಸಿಟಿವಿ ದೃಶ್ಯಗಳು ಪತ್ತೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ HR 26CE7674 ನಂಬರ್ ಪ್ಲೇಟ್ ಹೊಂದಿರುವ ಕಾರು ಮಧ್ಯಾಹ್ನ 3.19 ಕ್ಕೆ ಕೆಂಪು ಕೋಟೆ ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸಿದ್ದು, ಸಂಜೆ 6.30 ರವರೆಗೆ ಅಲ್ಲಿಯೇ ನಿಂತಿತ್ತು ಎಂದು ತಿಳಿದುಬಂದಿದೆ.
ಒಂದು ನಿಮಿಷದ ಸಿಸಿಟಿವಿ ವಿಡಿಯೋ ಪತ್ತೆಯಾಗಿದ್ದು, ಕಾರು ಬದರ್ಪುರ್ ಗಡಿಯ ಮೂಲಕ ಹಾದುಹೋಗುವುದನ್ನು ಸ್ಪಷ್ಟವಾಗಿ ಕಂಡು ಬಂದಿದೆ. ಇನ್ನೊಂದು ವೀಡಿಯೊದಲ್ಲಿ ಚಾಲಕನ ಕೈ ಕಿಟಕಿಯಿಂದ ಹೊರಗೆ ಚಾಚಿರುವುದೂ ಕಂಡು ಬಂದಿದೆ.

ತನಿಖಾ ಸಂಸ್ಥೆಗಳು ಪಡೆದ ದೃಶ್ಯಗಳ ಪ್ರಕಾರ, ಕಾರು ಸುಮಾರು ಮೂರು ಗಂಟೆಗಳ ಕಾಲ ಪಾರ್ಕಿಂಗ್ ಸ್ಥಳದಲ್ಲಿಯೇ ನಿಂತಿತ್ತು. ಆ ಸಮಯದಲ್ಲಿ ವಾಹನದ ಬಳಿ ಯಾರೂ ಇರಲಿಲ್ಲ ಎನ್ನಲಾಗುತ್ತಿದೆ.

ಸಂಜೆ ಕಾರು ಪಾರ್ಕಿಂಗ್ ಸ್ಥಳದಿಂದ ಹೊರಬಂದಾಗ, ಆ ಪ್ರದೇಶದಲ್ಲಿ ಭಾರೀ ಸಂಚಾರ ದಟ್ಟಣೆ ಇತ್ತು ಎಂಬುದು ದೃಶ್ಯಗಳಿಂದ ಗೊತ್ತಾಗುತ್ತಿದೆ. ಅದಕ್ಕಾಗಿಯೇ ಕಾರು ನಿಧಾನವಾಗಿ ಚಲಿಸಿತು ಮತ್ತು ಕೆಲವು ನಿಮಿಷಗಳ ನಂತರ ಸ್ಫೋಟದ ಸ್ಥಳಕ್ಕೆ ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !