September 10, 2026
Thursday, September 10, 2026
spot_img

ಜಾರಕಿಹೊಳಿ ಕುಟುಂಬದ ಮೇಲೆ ED ದಾಳಿ: ಕೇಂದ್ರದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್‌ ಕಾರ್ಯಕರ್ತರು

ಹೊಸದಿಗಂತ ವರದಿ ​ಬೆಳಗಾವಿ:

ಸಚಿವ ಸತೀಶ್‌ ಜಾರಕಿಹೊಳಿ ಅವರ ಕುಟುಂಬ ಹಾಗೂ ಆಪ್ತರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿರುವುದನ್ನು ಖಂಡಿಸಿ ಗುರುವಾರ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಬಸವೇಶ್ವರ ವೃತ್ತದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರು ಹಾಗೂ ಅವರ ಆಪ್ತರನ್ನು ಗುರಿಯಾಗಿಸಿಕೊಂಡು ಕೇಂದ್ರದ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸತೀಶ್‌ ಜಾರಕಿಹೊಳಿ ಅವರು ಹಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದು, ಅವರ ರಾಜಕೀಯ ಜೀವನದ ಮೇಲೆ ಯಾವುದೇ ಕಳಂಕವಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿರುವುದನ್ನು ಸಹಿಸಿಕೊಳ್ಳಲಾಗದೆ ರಾಜಕೀಯ ಉದ್ದೇಶದಿಂದ ಇಂತಹ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಾಲ್ಮೀಕಿ ಸಮಾಜದ ಮುಖಂಡರು ಮಾತನಾಡಿ, ಸತೀಶ್‌ ಜಾರಕಿಹೊಳಿ ಅವರು ನಿಷ್ಠಾವಂತ ರಾಜಕಾರಣಿಯಾಗಿದ್ದು, ಜಾರಕಿಹೊಳಿ ಕುಟುಂಬದ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರೇಬಾಗೇವಾಡಿಯ ಪ್ರಮುಖ ರಸ್ತೆಯಲ್ಲಿ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು, ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !