ವಿಯೆಟ್ನಾಂ ಯುದ್ಧದ 50 ವರ್ಷಗಳ ನಂತರ ಬಲಿಪಶು ʼನಾಪಾಮ್‌ ಹುಡುಗಿʼಗೆ ಕೊನೆಗೂ ಚರ್ಮ ಚಿಕಿತ್ಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಯುದ್ಧಗಳ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವ ವಿಯೆಟ್ನಾಂ ಯುದ್ಧದ ಗಾಯಾಳುವಾಗಿದ್ದ ಅಮಾಯಕ ʼನಾಪಾಮ್‌ ಹುಡುಗಿʼ ಕೊನೆಗೂ ಯುದ್ಧ ಮಾಡಿದ ದೇಶದಲ್ಲೇ ತನ್ನ ಭೀಕರ ಸುಟ್ಟಗಾಯಗಳಿಗೆ ಚರ್ಮದ ಚಿಕಿತ್ಸೆಯನ್ನು ಪಡೆದಿದ್ದಾಳೆ.

1972ರ ಅಮೆರಿಕ-ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಅಮೆರಿಕನ್‌ ಬಾಂಬ್‌ ದಾಳಿಯಿಂದಾಗಿ ಗಾಯಾಳುವಾಗಿದ್ದ ಈಕೆ ಯುದ್ಧವಾದ 50 ವರ್ಷಗಳ ನಂತರ ಅಮರಿಕದ ಮಾಯಾಮಿಯ ಆಸ್ಪತ್ರೆಯೊಂದರಲ್ಲಿ ಚರ್ಮದ ಚಿಕಿತ್ಸೆ ಪಡೆದಿದ್ದಾಳೆ. ʼನಾಪಾಮ್‌ ಹುಡುಗಿʼ ಎಂದೇ ಅಡ್ಡ ಹೆಸರು ಹೊಂದಿರುವ ಕಿಮ್ ಫುಕ್ ಫಾನ್ ಟಿ ಎಂಬಾಕೆ ತನ್ನ 9ನೇ ವಯಸ್ಸಿನಲ್ಲಿ ವಿಯೆಟ್ನಾಂನ ಪುಟ್ಟ ಹಳ್ಳಿ ನಾಪಾಮ್ ನಲ್ಲಿ ಆಟವಾಡುತ್ತಿದ್ದಾಗ ಅಮೆರಿಕನ್‌ ಬಾಂಬರ್‌ ವಿಮಾನಗಳು ಬಾಂಬ್‌ ಮಳೆಗರೆದವು. ಬಾಂಬ್‌ ಸ್ಫೋಟಕ್ಕೆ ಆಕೆಯ ಹಿಂಭಾಗದ ಚರ್ಮ ಪೂರ್ತಿಯಾಗಿ ಸುಟ್ಟು ಹೋಗಿತ್ತು. ಬಟ್ಟೆಗಳು ಸುಟ್ಟುಹೋಗಿದ್ದರಿಂದ ಬೆತ್ತಲಾಗಿ ಇತರ ಪುಟ್ಟ ಮಕ್ಕಳೊಂದಿಗೆ ಭಯದಿಂದ ಅಳುತ್ತಾ ಆಕೆ ಓಡಿಹೋಗುತ್ತಿರುವ ಚಿತ್ರವೊಂದು ಪೋಟೋ ಜರ್ನಲಿಸ್ಟ್‌ ಒಬ್ಬರ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಯುದ್ಧದ ಭೀಕರತೆಯನ್ನು ವಿವರಿಸುವಲ್ಲಿ ಆಕೆಯ ಪೋಟೊಗಳು ಉಪಮೆಯಾಗಿ ಹೋಗಿದ್ದವು. ‌ʼನಾಪಾಮ್‌ ಹುಡುಗಿʼಯ ಕುರಿತಾಗಿ ಅಂತರಾಷ್ಟ್ರಿಯ ಮಟ್ಟದಲ್ಲಿ ಕಂಬನಿ ಮಿಡಿಯಲಾಗಿತ್ತು.

ಆಕೆಯ ದೇಹದ ಮೇಲಿನ ಸುಟ್ಟ ಗಾಯಗಳನ್ನು ನಿವಾರಿಸಲು ಒಂದು ವರ್ಷ ಆಸ್ಪತ್ರೆಯಲ್ಲೇ ಕಳೆಯಬೇಕಾಯಿತು, ಮೂರನೇ ಹಂತದ ಈ ಸುಟ್ಟಗಾಯಗಳನ್ನು ಸರಿಪಡಿಸಲು 17 ಶಸ್ತ್ರಚಿಕಿತ್ಸೆ ಮಾಡಲಾಗಿತ್ತು, ಆಕೆ ಪುನಃ ಎಲ್ಲರಂತೆ ನಡೆದಾಡಲು ಪುನಃ ಹಲವಾರು ಕಾರ್ಯವಿಧಾನಗಳಿಗೆ ಒಳಗಾಗಬೇಕಾಯಿತು. ಅದರೂ ಆಕೆಯ ಸಂಕಟ ಪೂರ್ತಿಯಾಗಿ ಕಡಿಮೆಯಾಗಿರಲಿಲ್ಲ.

ಫಾನ್ ಟಿ ಮತ್ತು ಅವರ ಪತಿ 1992 ರಲ್ಲಿ ಕಮ್ಯುನಿಸ್ಟ್ ಆಳ್ವಿಕೆಯ ವಿಯೆಟ್ನಾಂನಿಂದ ಪಲಾಯನ ಮಾಡಿದರು ಮತ್ತು ಕೆನಡಾದಲ್ಲಿ ಆಶ್ರಯ ಪಡೆದರು. 2015 ರಲ್ಲಿ, ಅವರು ಮಿಯಾಮಿಯಲ್ಲಿ (ಅಮೆರಿಕದ ಫ್ಲೋರಿಡಾದಲ್ಲಿ) ಡಾ ಜಿಲ್ ಜ್ವೈಬೆಲ್ ಅವರನ್ನು ಸಂಪರ್ಕಿಸಿದರು, ಅವರ ಸುಟ್ಟಗಾಯಗಳು ಮತ್ತು ಗಾಯಗಳಿಗೆ ವಿಶೇಷ ಚಿಕಿತ್ಸೆಗಾಗಿ ಪ್ರಯತ್ನಿಸಿದರು. ಫಾನ್ ಟಿ ಅವರ ಕಥೆಯನ್ನು ತಿಳಿದ ಡಾ ಜ್ವೈಬೆಲ್ ಚಿಕಿತ್ಸೆಯನ್ನು ಉಚಿತವಾಗಿ ಮಾಡಲು ಒಪ್ಪಿಕೊಂಡರು.

ಸಿಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಫಾನ್‌ ಟೀ ಆ ಭಯಾನಕ ಘಟನೆಯನ್ನು ಹೀಗೆ ವಿವರಿಸುತ್ತಾರೆ “ನಾನು ಇತರ ಸ್ನೆಹಿತರೊಂದಿಗೆ ಆಟವಾಡುತ್ತಿದ್ದೆ, ಅಲ್ಲಿದ್ದ ವಿಯೆಟ್ನಾಂ ಸೈನಿಕರು ನನಗೆ ಓಡಲು ಹೇಳಿದರು, ನಾನು ಹಿಂತಿರುಗಿ ನೋಡಿದಾಗ ಬಾಂಬುಗಳ ದಾಳಿಗೆ ಸಿಕ್ಕು ನನ್ನ ಹಳ್ಳಿಯು ಅಗ್ನಿಜ್ವಾಲೆಗಳಿಂದ ಸುಟ್ಟು ಹೋಗುತ್ತಿತ್ತು. ಅದೇ ಬೆಂಕಿಯ ಕೆನ್ನಾಲಿಗೆ ನನ್ನನ್ನೂ ಆವರಿಸಿಕೊಂಡಿತ್ತು ನನ್ನ ಬಟ್ಟೆಗಳೆಲ್ಲಾ ಸುಟ್ಟು ಮೈಗೆಲ್ಲಾ ಗಾಯಗಳಾದವು ಬಿಸಿ…ಬಿಸಿ ತುಂಬಾ ಬಿಸಿ.. ಉರಿ ಎನ್ನುತ್ತಾ ಓಡಿಹೋದದ್ದಷ್ಟೇ ನನಗೆ ನೆನಪಿದೆ”

ಹೀಗೆ ಭೀಕರ ಯುದ್ಧದ ದಾಳಿಯ ಅಮಾಯಕ ಬಲಿಪಶು ಫಾನ್‌ ಟಿ ಕಳೆದ 50 ವರ್ಷಗಳಿಂದ ಯುದ್ಧದ ಕೊಡುಗೆಯಾದ ತನ್ನ ಸುಟ್ಟಗಾಯಗಳನ್ನು ಹೊತ್ತುಕೊಂಡು ಬದುಕುತ್ತಿದ್ದಳು, ಕೊನೆಗೂ ಆಕ್ರಮಣ ಮಾಡಿದ ದೇಶದಲ್ಲಿಯೇ ಆಕೆ ಶಸ್ತ್ರ ಚಿಕಿತ್ಸೆ ಪಡೆದಿದ್ದಾಳೆ. ಚಿಕಿತ್ಸೆ ಪಡೆದ ಫಾನ್‌ ಟಿ (ನಾಪಾಮ್‌ ಹುಡುಗಿ) “ನಾನೀಗ ಯುದ್ಧದ ಬಲಿಪಶುವಲ್ಲ, ಶಾಂತಿಗಾಗಿ ಕರೆನೀಡಲು ಬದುಕುಳಿದ ಅದೃಷ್ಟವಂತೆ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!