ಹೊಸದಿಗಂತ ಡಿಜಿಟಲ್ ಡೆಸ್ಕ್:
ಏನೇ ಹೇಳಿ ಮಳೆಗಾಲದಲ್ಲಿ ಒಂದೊಂದು ತಿಂಡಿಯೂ ಒಂದೊಂದು ರೀತಿಯಲ್ಲಿ ಹಳೆಯ ನೆನಪನ್ನು ಮರುಕಳಿಸುತ್ತದೆ. ಧೋ ಎಂದು ಸುರಿಯುವ ಮಳೆ…ಶಾಲೆಯಿಂದ ಬಂದ ಹುಡುಗರು…ಬಿಸಿ ಬಿಸಿ ಚಹಾ…ವ್ಹಾವ್…ಜೊತೆಗೆ ಒಂದಷ್ಟು ತಿಂಡಿ…ಹಾಗಾದ್ರೆ ಈ ದಿನ ಓಲ್ಡ್ ಈಸ್ ಗೋಲ್ಡ್ ಎಂಬಂತೆ ಅವಲಕ್ಕಿ ಉಪ್ಕರಿ ಜೊತೆಗೆ ಹಲಸಿನ ಹಪ್ಪಳ ತಿನ್ನೋಣವೇ…!?
ಹಿಂದೆಲ್ಲಾ ಅವಲಕ್ಕಿ ಉಪ್ಕರಿ ಮಾಡಿದ್ರೆ ಹಲಸಿನ ಹಪ್ಪಳ ಜೊತೆಗಿರೋದು ಗ್ಯಾರಂಟಿ. ಅವಲಕ್ಕಿಗೆ ಹಲಸಿನ ಹಪ್ಪಳ ಹುಡಿಮಾಡಿ ಮಿಶ್ರಮಾಡಿ ತಿನ್ನುವ ಮಜವೇ ಬೇರೆ. ಹಲಸಿನ ಹಪ್ಪಳ ಒಲೆಯಲ್ಲಿ ಸುಟ್ಟು ಇಟ್ಟುಕೊಳ್ಳಿ. ಅಥವಾ ಎಣ್ಣೆಯಲ್ಲಿ ಕರಿದಿಟ್ಟುಕೊಳ್ಳಿ.
ಅರ್ಧ ಕಡಿ ತೆಂಗಿನಕಾಯಿಯನ್ನು ತುರಿದಿಟ್ಟುಕೊಳ್ಳಿ. ಎರಡು ಹಸಿಮೆಣಸು(ಕಾಯಿಮೆಣಸು), ಎರಡು ಈರುಳ್ಳಿಯನ್ನು ಶುಚಿಗೊಳಿಸಿ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಒಂದು ಪ್ರತ್ಯೇಕ ಪಾತ್ರೆಯಲ್ಲಿ ತೆಂಗಿನ ತುರಿಹಾಕಿ. ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಹಸಿಮೆಣಸನ್ನು ಚೆನ್ನಾಗಿ ನುರಿಯಿರಿ. ಬೇವಿನ ಸೊಪ್ಪಿನ ಒಗ್ಗರಣೆಯನ್ನು ನೀಡಿ. ನಂತರ ಕತ್ತರಿಸಿದ ಈರುಳ್ಳಿಯನ್ನು ಜೊತೆಗೆ ಸೇರಿಸಿ ಮಿಶ್ರಮಾಡಿ. ಬೇಕಾದಷ್ಟು ಅವಲಕ್ಕಿ ಸೇರಿಸಿ ಸರಿಯಾಗಿ ಮಿಶ್ರಮಾಡಿ. ಕೊನೆಯಲ್ಲಿ ಎರಡು ಟೀ ಸ್ಪೂನ್ ಸಕ್ಕರೆ ಸೇರಿಸಿ. ಅವಲಕ್ಕಿ ಉಪ್ಕರಿ ರೆಡಿ. ಹಪ್ಪಳ ಸೇರಿಸಿ ತಿನ್ನಲು ಬಲುರುಚಿ.