ಹೊಸದಿಗಂತ ಡಿಜಿಟಲ್ ಡೆಸ್ಕ್
ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಪ್ರವಾಸಿ ಪಾಕಿಸ್ತಾನ 342 ರನ್‌ಗಳನ್ನು ಚೇಸ್ ಮಾಡಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಬದಲಾಗಿದೆ.
ಈ ಗೆಲುವಿನೊಂದಿಗೆ ಪಾಕ್ 58.33 ಗೆಲುವಿನ ಸರಾಸರಿಯೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದಿದೆ. ದಕ್ಷಿಣ ಆಫ್ರಿಕಾ (71.43%) ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ. ಆಸ್ಟ್ರೇಲಿಯಾ (70%) ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಎರಡು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಮೂರನೇ ಸ್ಥಾನ ಪಡೆದಿದ್ದ ಶ್ರೀಲಂಕಾ ಆರನೇ ಸ್ಥಾನಕ್ಕೆ (48.15 ಗೆಲುವಿನ ಶೇಕಡಾವಾರು) ಕುಸಿದಿದೆ.
ಪಾಕಿಸ್ತಾನದ ಗೆಲುವಿನಿದಾಗಿ ಭಾರತವು ಒಂದು ಸ್ಥಾನವನ್ನು ಮೇಲೇರಿ ನಾಲ್ಕನೇ (52.08%) ಸ್ಥಾನಕ್ಕೆ ಜಿಗಿದಿದೆ. ವೆಸ್ಟ್ ಇಂಡೀಸ್ ಐದನೇ (50%) ಸ್ಥಾನಕ್ಕೆ ಏರಿಕೆ ಕಂಡಿದೆ. ಎರಡನೇ ಟೆಸ್ಟ್‌ನಲ್ಲಿ ಪಾಕಿಸ್ತಾನ ಗೆದ್ದರೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಅಂತರವನ್ನು ಮತ್ತಷ್ಟು ಕಡಿಮೆ ಮಾಡಬಹುದು. ಅದೇ ರೀತಿ, ಶ್ರೀಲಂಕಾ ಪಾಕಿಸ್ತಾನವನ್ನು ಸೋಲಿಸಿದರೆ ಮೂರನೇ ಸ್ಥಾನವನ್ನು ಮರಳಿ ಪಡೆಯಬಹುದು ಮತ್ತು ಸರಣಿಯನ್ನು ಸಮಬಲಗೊಳಿಸಿಕೊಳ್ಳಬಹುದಾಗಿದೆ.
ಫೈನಲ್ ಗೇರಲು ಟೀಂ ಇಂಡಿಯಾ ಏನು ಮಾಡಬೇಕು?
ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23 ಫೈನಲ್‌ಗೆ ಅರ್ಹತೆ ಪಡೆಯಲು ತಮಗೆ ಉಳಿದಿರುವ ಎಲ್ಲಾ ಟೆಸ್ಟ್‌ಗಳನ್ನು ಗೆಲ್ಲಬೇಕಿದೆ. ಜೊತೆಗೆ ತಮ್ಮ ಮೇಲಿನ ತಂಡಗಳಾದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನವು ಕೆ ಪಂದ್ಯಗಳಲ್ಲಿ ಸೋಲು ಕಾಣಬೇಕು. ಭಾರತವು ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ತವರಿನಲ್ಲಿ ಇನ್ನೂ ಎರಡು ಟೆಸ್ಟ್ ಸರಣಿಗಳನ್ನು ಆಡಲಿದೆ. ಬಾಂಗ್ಲಾದೇಶದ ವಿರುದ್ಧ ಎರಡು ಟೆಸ್ಟ್‌ಗಳನ್ನು ಆಡಿದರೆ, ಆಸ್ಟ್ರೇಲಿಯಾ ವಿರುದ್ಧ 4- ಟೆಸ್ಟ್‌ಗಳ ಸರಣಿ ಇದೆ. ಈ ಎಲ್ಲಾ ಪಂದ್ಯಗಳು ತವರಿನಲ್ಲೇ ನಡೆಯುತ್ತಿರುವುದು ಭಾರತಕ್ಕೆ ಅನುಕೂಲವಾಗಿ ಪರಿಣಮಿಸಲಿದೆ. ರೋಹಿತ್ ಶರ್ಮಾ ಪಡೆ ಫೈನಲ್ ಪ್ರವೇಶಿಸುವ ಆಸೆ ಈಡೇರಿಸಿಕೊಳ್ಳಲು ತನ್ನ ಉಳಿದ ಆರು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಒಂದೇ ಒಂದು ಡ್ರಾ ಕೂಡ ತಂಡದ ಫೈನಲ್‌ಗೆ ಪ್ರವೇಶಿಸುವ ಅವಕಾಶವನ್ನು ಕಿತ್ತುಕೊಳ್ಳಲಿದೆ. ಜೊತೆಗೆ ಇತರ ತಂಡಗಳ ಫಲಿತಾಂಶ ಆಧರಿಸಿ ಭಾರತದ ಭವಿಷ್ಯ ನಿರ್ಧಾರವಾಗಲಿದೆ.