ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಪಯಸ್ವಿನಿ’ ಮಾವಿನ ಮರವು ಮತ್ತೆ ಚಿಗುರತೊಡಗಿದೆ. ಜೂ 15ರಂದು ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಿಂದ ಈ ಮರಕ್ಕೆ ಹಾನಿಯಾಗದ ರೀತಿಯಲ್ಲಿ ‘ಏರ್ ಲಿಫ್ಟ್’ ಮಾಡಿ ಅಡ್ಕತ್ತಬೈಲು ಶಾಲೆಯ ಅಂಗಳದಲ್ಲಿ ನೆಡಲಾಗಿತ್ತು. ಅಂದು 2006 ರಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಕವಯಿತ್ರಿ ಸುಗತಕುಮಾರಿ, ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಈ ಮಾವಿನ ಗಿಡ ನೆಟ್ಟಿದ್ದರು. ಅದಕ್ಕೆ ಪಯಸ್ವಿನಿ ಎಂದು ನಾಮಕರಣ ಮಾಡಿದ್ದರು.
ಬಳಿಕ ಪರಿಸರ ಪ್ರೇಮಿಗಳು ಹಾಗೂ ನಾಗರಿಕರು ಸೇರಿ ಬೆಳಸಿದ ಈ ಮಾವಿನ ಮರ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಅಭಿವೃದ್ಧಿಯ ಅಂಗವಾಗಿ ತೆರವುಗೊಂಡು ಬೇರೆಡೆಗೆ ಶಿಫ್ಟ್ ಆಗಿತ್ತು. ಇದೀಗ ಮತ್ತೆ ಚಿಗುರೊಡೆದಿದ್ದು ಎಲ್ಲರಲ್ಲಿ ಖುಷಿ ತಂದಿದೆ.