ಹೊಸದಿಗಂತ ವರದಿ ಹುಬ್ಬಳ್ಳಿ:
ಸರ್ಕಾರಿ ಇಲಾಖೆಯಲ್ಲಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಅವುಗಳನ್ನು ಪರಿಶೀಲಿಸಿ, ಪಾವತಿಸುವಂತೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದರು.
ಈ ಹಿಂದೆ ಬಿಲ್ ಪಾವತಿಸದ ದೊಡ್ಡ ನೀರಾವರಿ ಇಲಾಖೆ, ಬಿಬಿಎಂಪಿ ಹಾಗೂ ಗ್ರಾಮ ಪಂಚಾಯ್ತಿಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಕೆಲವು ಗ್ರಾಮ ಪಂಚಾಯಿತಿಗಳು ವಾರದವರೆಗೆ ಸಮಸ್ಯೆ ಅನುಭವಿಸಿವೆ. ಗ್ರಾಹಕರಿಗೂ ಸರ್ಕಾರಿ ಇಲಾಖೆಗೂ ಒಂದೇ ನ್ಯಾಯ ಎಂದು ಮಂಗಳವಾರ ಮಾಧ್ಯಮದವರಿಗೆ ತಿಳಿಸಿದರು.
ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಬಾಕಿ ಇಟ್ಟುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಿಪೇಡ್ ಮೀಟರ್ ಅಳವಡಿಸುವ ಚಿಂತನೆ ನಡೆದಿದೆ ಎಂದು ಹೇಳಿದರು.