ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ಎಸ್.ಎಸ್. ರಾಜಮೌಳಿ ಯಾವ ಕೆಲಸವನ್ನಾದರೂ ನಿಖರತೆಯೊಂದಿಗೆ, ವರ್ಷಗಳ ಪರಿಶ್ರಮದಿಂದ ರೂಪಿಸುವಲ್ಲಿ ಪ್ರಸಿದ್ಧರು. ಆದರೆ, ಅವರ ಹೊಸ ಸಿನಿಮಾ ‘ವಾರಾಣಸಿ’ ಟೈಟಲ್ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಅನಿರೀಕ್ಷಿತ ಘಟನೆ ಜರುಗಿ, ನಿರ್ಮಾಣ ತಂಡ ಅನುಭವಿಸಿರುವ ಶ್ರಮ ಕೆಲ ಕ್ಷಣಗಳಲ್ಲಿ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹೌದು! ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಗ್ಲೋಬ್ ಟ್ರಾಟರ್ ಕಾರ್ಯಕ್ರಮಕ್ಕೆ ಲಕ್ಷಾಂತರ ಅಭಿಮಾನಿಗಳು ಹಾಜರಾಗಿದ್ದ ಸಂದರ್ಭದಲ್ಲಿ, ದೊಡ್ಡ ಎಲ್ಇಡಿ ಪರದೆಯಲ್ಲಿ ಟೀಸರ್ ಪ್ರದರ್ಶನ ಮಾಡಲು ಯೋಜಿಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯೊಂದು ಈ ಯೋಜನೆಯನ್ನು ತಡೆದು ನಿಲ್ಲಿಸಿತು.
ಟೀಸರ್ ಪ್ರದರ್ಶನಕ್ಕಾಗಿ ಅಗತ್ಯವಿದ್ದ ಪರೀಕ್ಷೆಯನ್ನು ತಂಡ ಹಿಂದಿನ ರಾತ್ರಿ ನಿರ್ವಹಿಸದ ಕಾರಣಕ್ಕೆ ರಾಜಮೌಳಿ ಕ್ಷಮೆ ಯಾಚಿಸಿದರು.
‘ಕಳೆದ ರಾತ್ರಿ ನಾವು ಈ ದೊಡ್ಡ ಪರದೆಯಲ್ಲಿ ಗ್ಲಿಂಪ್ಸ್ ಪ್ಲೇ ಮಾಡಿ ಪರೀಕ್ಷಿಸಲಿಲ್ಲ. ಯಾಕೆಂದರೆ ಅದನ್ನು ಲೀಕ್ ಮಾಡಲು, ನಮ್ಮ ಒಂದು ವರ್ಷದ ಶ್ರಮವನ್ನು ಹಾಳು ಮಾಡಲು ಇಲ್ಲೊಂದು ಡ್ರೋನ್ ಹಾರಾಡುತ್ತಿತ್ತು. ಅದಕ್ಕಾಗಿ ನಾವು ಟೆಸ್ಟ್ ಮಾಡದೆಯೇ ರಿಸ್ಕ್ ತೆಗೆದುಕೊಂಡೆವು. ಈಗ ಗ್ಲಿಂಪ್ಟ್ ಪ್ಲೇ ಮಾಡಲು ವಿದ್ಯುತ್ ಶಕ್ತಿ ಸಾಕಾಗುತ್ತಿಲ್ಲ. ಅದಕ್ಕಾಗಿ ಇನ್ನೂ 10 ನಿಮಿಷ ಹಿಡಿಯಬಹುದು’ ಎಂದು ರಾಜಮೌಳಿ ಹೇಳಿದರು.
‘ವಾರಾಣಸಿ’ ಚಿತ್ರ ಬಿಡುಗಡೆ 2027ಕ್ಕೆ ನಿರ್ಧಾರವಾಗಿದ್ದು, ಇದನ್ನು ಇತ್ತೀಚಿನವರೆಗೂ ‘SSMB 29’ ಎಂದು ಕರೆಯಲಾಗುತ್ತಿತ್ತು. ಮಹೇಶ್ ಬಾಬು ಅವರು ರುದ್ರ ಎಂಬ ಪಾತ್ರದಲ್ಲಿ ಕಾಣಿಸಲಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ, ಪೃಥ್ವಿರಾಜ್ ಸುಕುಮಾರನ್ ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಗಮನ ಸೆಳೆದಿದೆ.

