ಭೂಮಿಯಿಂದ 30ಕಿಮಿ ಮೇಲೆ ಬಾನಂಗಣದಲ್ಲಿ ಹಾರಿತು ತ್ರಿವರ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂದು ದೇಶದೆಲ್ಲೆಡೆ ಸ್ವಾತಂತ್ರ್ಯದ ಅಮೃತಮಹೋತ್ಸವ ಮನೆ ಮಾಡಿದೆ. ಮನೆಮನಗಳಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಇಲ್ಲೊಂದು ಸಂಸ್ಥೆಯು ಭೂಮಿಯಿಂದ 30 ಕಿಲೊಮೀಟರ್‌ ಮೇಲಿನ ಬಾನಂಗಣದಲ್ಲಿ ತ್ರಿವರ್ಣಧ್ವಜವನ್ನು ಅನಾವರಣಗೊಳಿಸಿದೆ. ರಾಷ್ಟ್ರ ಧ್ವಜವನ್ನು ಬಲೂನ್‌ ಮೂಲಕ ಭೂಮಿಯಿಂದ 1,06,000 ಅಡಿ ಎತ್ತರಕ್ಕೆ ಕಳುಹಿಸಲಾಗಿದೆ.

ಆಜಾದಿ ಕಾ ಅಮೃತ್‌ ಮಹೋತ್ಸವದ ಭಾಗವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗಿದ್ದು ಸ್ಪೇಸ್‌ ಕಿಡ್ಸ್‌ ಇಂಡಿಯಾ ಸಂಸ್ಥೆಯ ವತಿಯಿಂದ 30ಕಿಮಿ ಎತ್ತರದಲ್ಲಿ ತ್ರಿವರ್ಣಧ್ವಜವನ್ನು ಅನಾವರಣಗೊಳಿಸಲಾಗಿದೆ. ದೇಶದ ಯುವ ವಿಜ್ಞಾನಿಗಳನ್ನು ಸೃಷ್ಟಿಸುವ ಈ ಸಂಸ್ಥೆಯು ಇತ್ತೀಚಿಗೆ 750 ವಿದ್ಯಾರ್ಥಿಗಳಿಂದ AzadiSAT ಅನ್ನು ಅಭಿವೃದ್ಧಿಪಡಿಸಿತ್ತು.

ಇದಲ್ಲದೇ ಭಾರತವು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಬಾಹ್ಯಾಕಾಶದಿಂದ ಸಂದೇಶಗಳು ಹರಿದುಬರುತ್ತಿವೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ ಅವರು ವೀಡಿಯೊ ಸಂದೇಶದಲ್ಲಿ ಭಾರತಕ್ಕೆ 75 ವರ್ಷಗಳ ಸ್ವಾತಂತ್ರ್ಯವನ್ನು ಅಭಿನಂದಿಸಲು ಸಂತೋಷವಾಗಿದೆ ಎಂದು ಹೇಳಿದ್ದಾರೆ. ದಶಕಗಳಿಂದ ಅಂತರರಾಷ್ಟ್ರೀಯ ಏಜೆನ್ಸಿಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೊತೆಗೆ ಅನೇಕ ಬಾಹ್ಯಾಕಾಶ ಮತ್ತು ವಿಜ್ಞಾನ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿದೆ.

ಏತನ್ಮಧ್ಯೆ, ಭಾರತೀಯ-ಅಮೆರಿಕನ್ ಗಗನಯಾತ್ರಿ ರಾಜಾ ಚಾರಿ ಕೂಡ ಭಾರತವನ್ನು ಅಭಿನಂದಿಸಿದ್ದಾರೆ. “ನಾಸಾ ಮತ್ತು ಇಸ್ರೋ ಸಹಕಾರದ ಸುದೀರ್ಘ ಇತಿಹಾಸವನ್ನು ಹೊಂದಿವೆ, ಭಾರತದಲ್ಲಿ ನಾಸಾ ಇಸ್ರೋದೊಂದಿಗೆ ಸೌಂಡಿಂಗ್ ರಾಕೆಟ್‌ಗಳಲ್ಲಿ ಕೆಲಸ ಮಾಡಿದ ಬಾಹ್ಯಾಕಾಶ ಯುಗದ ಆರಂಭಿಕ ದಿನಗಳು ಈಗಲೂ ಹಸಿರಾಗಿದೆ.. ನಾವು ಜಂಟಿ ಬಾಹ್ಯಾಕಾಶ ಮತ್ತು ಭೂ ವಿಜ್ಞಾನ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಸಹಕಾರವು ಇಂದಿಗೂ ಮುಂದುವರೆದಿದೆ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!