ನವಭಾರತದ ಸಾಕಾರಕ್ಕಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗೂ ಈ ದೇಶ ನಮನ ಸಲ್ಲಿಸುತ್ತದೆ: ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 9ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಹೊಸ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ನವಭಾರತದ ಸಾಕಾರಕ್ಕಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗೆ ಈ ದೇಶ ನಮನ ಸಲ್ಲಿಸುತ್ತದೆ ಎಂದು ಹೇಳಿದರು.

ನಮ್ಮ ಸ್ವಾತಂತ್ರ್ಯ ತ್ಯಾಗಗಳ ಹೋರಾಟದ ಫಲವಾಗಿದೆ, ನಮಗೆ ಸ್ವಾತಂತ್ರ್ಯ ನೀಡಿದ್ದಕ್ಕಾಗಿ ಅನೇಕ ಮಹನೀಯರನ್ನು ಈ ಸಂದರ್ಭದಲ್ಲಿ ನೆನೆಯಬೇಕು. ಗುಲಾಮಗಿರಿಯ ಸಂಕೋಲೆಯನ್ನು ಒಡೆಯುವಲ್ಲಿ ಅವರ ಹೋರಾಟ ಅಪ್ರತಿಮವಾಗಿದೆ. ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್ ಅಂತವರು ನಮಗೆ ಮಾರ್ಗದರ್ಶಕರು ಎಂದರು.

ʻಆಜಾದಿ ಕಾ ಅಮೃತ ಮಹೋತ್ಸವʼ ಭಾರತಕ್ಕೆ ಸೀಮಿತವಾಗಿಲ್ಲ, ನಮ್ಮ ರಾಷ್ಟ್ರಧ್ವಜವನ್ನು ವಿಶ್ವದಾದ್ಯಂತ ಬೀಸಲಾಗಿದೆ. ನಾರಾಯಣ ಗುರುಗಳಿಂದ ಹಿಡಿದು ರವೀಂದ್ರನಾಥ ಟ್ಯಾಗೋರ್‌ವರೆಗೆ ಹಲವಾರು ಮಹನೀಯರು ದೇಶವನ್ನು ಜಾಗೃತಗೊಳಿಸಿದ್ದಾರೆ. ಈ ದೇಶ ಅನೇಕ ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡಿದೆ. ಇಂತಹ ಪುಣ್ಯ ಭೂಮಿಯಲ್ಲಿರುವ ನಾವೇ ಅದೃಷ್ಟವಂತರು ಎಂದರು. ಭಾರತ ಪ್ರಜಾಪ್ರಭುತ್ವದ ತಾಯಿ ಇದ್ದಂತೆ ಎಂಬ ಮಾತನ್ನು ಮೋದಿ ಈ ಸಂದರ್ಭದಲ್ಲಿ ಹೇಳಿದ್ರು.

ವಿವಿಧತೆಯಲ್ಲಿ ಏಕತೆಯೇ ದೇಶದ ಶಕ್ತಿ, ಇಡೀ ವಿಶ್ವವೇ ಭಾರತದತ್ತ ನೋಡುವಂತೆ ನಾವು ಬೆಳೆದಿದ್ದೇವೆ. ಇಡೀ ವಿಶ್ವವೇ ಭಾರತದ ಬಗ್ಗೆ ಮಾತನಾಡುತ್ತಿದೆ. ದೇಶದ ಜನರು ಸಕಾರಾತ್ಮಕ ಬದಲಾವಣೆಯನ್ನು ಬಯಸುತ್ತಿದ್ದಾರೆ ಮತ್ತು ಆ ಬದಲಾವಣೆಗಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ. ನವಭಾರತದ ಸಾಕಾರಕ್ಕಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗೆ ಈ ದೇಶವು ನಮಸ್ಕರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!