ಹೊಸದಿಗಂತ ಡಿಜಿಟಲ್ ಡೆಸ್ಕ್
”ಕಮ್ಯುನಿಸಂ ಎಂದರೆ ಪ್ರೀತಿಯಲ್ಲ. ಕಮ್ಯುನಿಸಂ ಎಂದರೆ ಸುತ್ತಿಗೆ. ಅದನ್ನು ಶತ್ರುಗಳನ್ನು ಕೊಲ್ಲಲು ಬಳಸುತ್ತೇವೆ” ಹೀಗೆಂದಿದ್ದರು ಚೀನಾದ ಸರ್ವೋಚ್ಛ ಕಮ್ಯುನಿಷ್ಟ್ ನಾಯಕ ಮಾವೋ ತ್ಸೆ ತುಂಗ್.
ಈ ಮಾತನ್ನು ಚೀನಾ ಇಂದಿಗೂ ಅಕ್ಷರಶಃ ಪಾಲಿಸುತ್ತದೆ. ಕಟ್ಟರ್ ಕಮ್ಯುನಿಸಂ ರಾಷ್ಟ್ರ ಚೀನಾದಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ಧ್ವನಿಯೆತ್ತುವಂತಿಲ್ಲ. ಹಾಗೇನಾದರೂ ಧ್ವನಿಯೆತ್ತವವರ ಧ್ವನಿಯನ್ನು ಹೊಸಕಿಹಾಕಲು ಚೀನಾ ಕ್ರೂರಾತಿಕ್ರೂರ ಕ್ರಮಗಳನ್ನು ಅನುಸರಿಸುತ್ತಿದೆ. ಅಲ್ಲಿ ಸರ್ಕಾರವನ್ನು ಎದುರು ಹಾಕಿಕೊಳ್ಳುವ ಭಿನ್ನಮತಿಯರಿಗೆ ಉಳಿಗಾಲವಿಲ್ಲ. ಹಾಗಿದ್ದರೂ ಚೀನಾ ಸರ್ಕಾರದ ಅಮಾನುಷ ನಡೆಗಳು, ಅಲ್ಲಿನ ಜನರ ಅಸಹಾಯಕತೆಯ ಕಣ್ಣೀರು, ನಾಗರಿಕರ ಮೇಲೆ ಎಸಗುವ ದೌರ್ಜನ್ಯದ ವಿಚಾರಗಳು ಕಠೋರ ಕಮ್ಯೂನಿಷ್ಟ್ ಪರದೆಯನ್ನು ದಾಟಿ ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ಆದರೂ ಅಪರೂಪಕೊಮ್ಮೆ ಇಂತಹ ವಿಚಾರಗಳು ಬಯಲಾಗುತ್ತಿರುತ್ತವೆ. ಆಗೆಲ್ಲಾ ಕಮ್ಯೂನಿಷ್ಟ್ ರಾಷ್ಟ್ರದ ಅಪಸವ್ಯಗಳು ಜಗತ್ತಿನ ಮುಂದೆ ಬೆತ್ತಲಾಗುತ್ತಿರುತ್ತವೆ.
ಸ್ಪೆನ್ ನ ಮ್ಯಾಡ್ರಿಡ್ ಮೂಲದ ಸೇಫ್ ಗಾರ್ಡ್ ಎಂಬ ಎನ್ಜಿಒ ಚೀನಾದ ಮುಚ್ಚಿನ ಬಾಗಿಲಿನ ಹಿಂದೆ ನಡೆಯುವ ಪೈಶಾಚಿಕ ಕೃತ್ಯಗಳನ್ನು ತೆರೆದಿಟ್ಟಿದೆ. ಚೀನಾ ಸಾಮಾಜಿ ತಾಣಗಳಲ್ಲಿ ಹೋರಾಟಗಾರರು ಹಂಚಿಕೊಂಡ ದತ್ತಾಂಶಗಳನ್ನು ಆಧರಿಸಿ ಹಾಗೂ ಸರ್ಕಾರದಿಂದ ಶಿಕ್ಷಿಸಲ್ಪಟ್ಟ ಹೋರಾಟಗಾರ ಕುಟುಂಬಗಳೊಂದಿಗೆ ಸಂದರ್ಶನ ನಡೆಸಿ ಈ ವರದಿಯನ್ನು ರೂಪಿಸಲಾಗಿದೆ.
ಚೀನೀ ಅಧ್ಯಕ್ಷ ಕ್ಷಿ ಜಿನ್ಪಿನ್ ವಿರುದ್ಧ, ಕಮ್ಯೂನಿಷ್ಟ್ ಸರ್ಕಾರದ ವಿರುದ್ಧ ಹೋರಾಡುವವರು ಹಾಗೂ ಪ್ರಜಾಪ್ರಭುತ್ವದ ಪರ ಧ್ವನಿಯೆತ್ತುವವರನ್ನು ಚೀನಾ ಸರ್ಕಾರ ಹೇಗೆ ನಡೆಸಿಕೊಳ್ಳುತ್ತಿದೆ ಎಂಬ ವಿಚಾರವನ್ನು ಈ ವರದಿಯಲ್ಲಿ ಬಿಚ್ಚಿಡಲಾಗಿದೆ. ಸರ್ಕಾರದ ವಿರುದ್ಧ ಧ್ವನಿಯೆತ್ತುವ ʼಭಿನ್ನಮತಿಯʼರನ್ನು ಬಲವಂತವಾಗಿ ತನ್ನ ವಶಕ್ಕೆ ಪಡೆಯುವ ಚೀನಾ ಸರ್ಕಾರ ಅವರನ್ನು ಹುಚ್ಚಾಸ್ಪತ್ರೆಗಳಿಗೆ ಅಟ್ಟುತ್ತಿದೆ. ಅಲ್ಲಿನ ವೈದ್ಯರು ಮತ್ತು ಆರೋಗ್ಯ ವ್ಯವಸ್ಥೆಯು ಸಹ ಭಿನ್ನಮತೀಯರನ್ನು ಶಿಕ್ಷಿಸುವಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದೆ ಎಂಬ ವಿಚಾರವನ್ನು ವರದಿಯಲ್ಲಿ ಹೇಳಲಾಗಿದೆ. 2015 ಮತ್ತು 2021 ರ ನಡುವೆ ರಾಜಕೀಯ ಕಾರಣಗಳಿಗಾಗಿ 99 ಜನರನ್ನು ಚೀನಾ ಬಲವಂತವಾಗಿ ಹುಚ್ಚಾಸ್ಪತ್ರೆಗೆ ಸೇರಿಸಿದೆ ಎಂದು ವರದಿ ಹೇಳಿದೆ.
ʼಹೀಗೆ ಆಸ್ಪತ್ರಗೆ ಸೇರುವ ಬಲಿಪಶುಗಳಿಗೆ ವೈದ್ಯರು ಬಲವಂತದ ಔಷಧಿಗಳನ್ನು ಪ್ರಯೋಗ ಮಾಡುತ್ತಾರೆ. ಇಂತಹ ಖೈದಿಗಳಿಗೆ ನ್ಯಾಯಾಂಗ ವ್ಯವಸ್ಥೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಅವರಿಗೆ ವಕೀಲರನ್ನು ಹೊಂದುವ, ವಿಚಾರಣೆ ಎದುರಿಸುವ ಭಾಗ್ಯವೂ ಇರುವುದಿಲ್ಲ. ಅವರನ್ನು ಮಾನಸಿಕ ಅಸ್ವಸ್ಥ ಎಂದು ‘ರೋಗನಿರ್ಣಯ’ ಮಾಡುವುದರಿಂದ ಅವರು ಬಿಡುಗಡೆಯಾದ ನಂತರವೂ ಸಾಮಾಜದಿಂದ ಪ್ರತ್ಯೇಕಿಸಲ್ಪಡುತ್ತಾರೆ” ಎಂದು ವರದಿ ಹೇಳಿದೆ.
ಹೀಗೆ ಬಲಿಪಶುಗಳಾಗುವವರಲ್ಲಿ ಹೆಚ್ಚಿನವರು ಚೀನಾದ ಸಾಮಾಜಿಕ ಶ್ರೇಣಿಯಲ್ಲಿ ಹೆಳಹಂತದಲ್ಲಿರುವ ಶಕ್ತಿಹೀನ ಜನರು. ಇವರ ಧ್ವನಿ ಹೊರಬರದಂತೆ ಹತ್ತಿಕ್ಕಲು ಚೀನಾ ಸರ್ಕಾರ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತದೆ. ಬಂಧಿತರಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗುತ್ತದೆ. ವಿಪರೀತ ಹೊಡೆತಗಳು, ಎಲೆಕ್ಟ್ರೋಶಾಕ್ ಥೆರಪಿ ಮತ್ತು ಕತ್ತಲಕೋಣೆಗಳಲ್ಲಿ ಬಂಧನದ ವಿಧಿಸುವ ಮೂಲಕ ಅವರ ಧ್ವನಿಯನ್ನು ಉಡುಗಿಸಲಾಗುತ್ತದೆ ಎಂದು ಕೈದಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.
ಹೀಗೆ ಬಂಧಿತರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಭಾವಚಿತ್ರಕ್ಕೆ ಬಣ್ಣ ಎರಚಿದ ಯುವತಿ, ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ ವ್ಯಕ್ತಿ, ಸೈನ್ಯದಲ್ಲಿ ಸೇವೆ ಸಲ್ಲಿಸುವಾಗ ಆದ ಗಾಯಕ್ಕೆ ವೈದ್ಯಕೀಯ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿ, ಪ್ರಜಾಪ್ರಭುತ್ವ ಪರ ಕಾರ್ಯಕರ್ತ ಸಾಂಗ್ ಜೈಮಿನ್ ಹೀಗೆ ಹಲವರಿದ್ದು, ಅಲ್ಲಿನ ಹುಚ್ಚಾಸ್ಪತ್ರೆಗಳಲ್ಲಿ ಇವರೆಲ್ಲ ʼಬಲವಂತವಾಗಿʼ ಹುಚ್ಚರಾಗುತ್ತಿದ್ದಾರೆ.
ರಾಜಕೀಯ ವಿರೋಧಿಗಳನ್ನು ಹಿಂಸಿಸಲು ಚೀನಾ ಹಿಂದಿನಿಂದಲೂ ಕ್ರೂರ ವಿಧಾನಗಳನ್ನು ಅನುಸರಿಸುತ್ತಾ ಬಂದಿದೆ. ಆದರೆ ಈಗಿನ ಅಧ್ಯಕ್ಷ ಕ್ಸಿ ಜಿನ್ ಪಿನ್ ಆಡಳಿತದಡಿ ಕಳೆದೊಂದು ದಶಕದಲ್ಲಿ ಹಿಂಸೆ ಉಚ್ಚ್ರಾಯ ಹಂತವನ್ನು ಮುಟ್ಟಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಭಿನ್ನಮತೀಯರು ಮತ್ತು ಅರ್ಜಿದಾರರ ಹೊರತಾಗಿ, ಕನಿಷ್ಠ ಒಂದು ಮಿಲಿಯನ್ ಜನರು (ಅವರಲ್ಲಿ ಬಹುತೇಕರು ಮುಸ್ಲಿಂ ಹೋರಾಟಗಾರರು) ಪಶ್ಚಿಮ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿ “ಮರು-ಶಿಕ್ಷಣ ಶಿಬಿರಗಳಲ್ಲಿ” ಬಂಧಿಸಲ್ಪಟ್ಟಿದ್ದಾರೆ. ಅವರಲ್ಲಿ ಹೆಚ್ಚಿನವರನ್ನು ಬಲವಂತವಾಗಿ ಕಾರ್ಮಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ವರದಿ ಹೇಳಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ