ಕೋಟ್ಯಾಧಿಪತಿ ವಿನೋದ್ ಕಾಂಬ್ಳಿಗೆ ಈಗ ಜೀವನ ಸಾಗಿಸಲು ಪರದಾಟ: ಬಿಸಿಸಿಐ ಪಿಂಚಣಿಯೇ ಆಧಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

1991 ರ ಭಾರತ ತಂಡದ ಸ್ಟಾರ್ ಈಗ ಬದುಕು ಸಾಗಿಸಲು ಪರದಾಡುತ್ತಿದ್ದಾರೆ . ಹೌದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಪ್ರಸುತ್ತ ಅವರ ಸಂಪಾದನೆಯ ಏಕೈಕ ಮೂಲವೆಂದರೆ ಬಿಸಿಸಿಐ ನೀಡುವ ಪಿಂಚಣಿ.

ಈ ಕುರಿತು ಸ್ವತಃ ಕಾಂಬ್ಳಿ ಹೇಳಿಕೊಂಡಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ನೀಡುತ್ತಿರುವ ಪಿಂಚಣಿ ಹಣದಲ್ಲಿ ತಾವು ಬದುಕು ಸಾಗಿಸುತ್ತಿದ್ದು, ತಾವು ಕ್ರಿಕೆಟ್ ಸಂಬಂಧಿತ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಟೀಂ ಇಂಡಿಯಾ ಹೇಳಿದ್ದಾರೆ.
ಇದೇ ವೇಳೆ ತಾವು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವುದು ತಮ್ಮ ಗೆಳೆಯ ಸಚಿನ್‌ ತೆಂಡುಲ್ಕರ್‌ಗೆ ಗೊತ್ತಿದೆ, ಆದರೆ ತಾವು ಯಾರಿಂದ ಏನನ್ನೂ ನಿರೀಕ್ಷಿಸುವುದಿಲ್ಲ ಎಂದು ಕಾಂಬ್ಳಿ ಹೇಳಿದ್ದಾರೆ.

50 ವರ್ಷದ ವಿನೋದ್ ಕಾಂಬ್ಳಿ, 2019ರಲ್ಲಿ ನಡೆದ ಮುಂಬೈ ಟಿ20 ಲೀಗ್‌ನಲ್ಲಿ ಕೊನೆಯ ಬಾರಿಗೆ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕೋವಿಡ್‌ ಲಗ್ಗೆಯಿಟ್ಟಿದ್ದರಿಂದಾಗಿ ಕೆಲ ಕಾಲ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾದವು. ಈಗ ಬಿಸಿಸಿಐ ನೀಡುವ 30,000 ಪಿಂಚಣಿ ಹಣದಿಂದ ಜೀವನ ಸಾಗಿಸುತ್ತಿರುವುದಾಗಿ ವಿನೋದ್ ಕಾಂಬ್ಳಿ ತಿಳಿಸಿದ್ದಾರೆ.

ನೆರೂಲ್‌ನಲ್ಲಿರುವ ತೆಂಡುಲ್ಕರ್ ಮಿಡಲೆಸೆಕ್ಸ್‌ ಗ್ಲೋಬಲ್ ಅಕಾಡೆಮಿಯಲ್ಲಿ ಯುವ ಕ್ರಿಕೆಟಿಗರಿಗೆ ಮೆಂಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ತಾವಿರುವ ಸ್ಥಳದಿಂದ ನೆರೂಲ್‌ಗೆ ಸಾಕಷ್ಟು ದೂರ ಪ್ರಯಾಣ ನಡೆಸಬೇಕಿದೆ ಎಂದು ಹೇಳಿದ್ದಾರೆ.

ನಾನು ಬೆಳಗ್ಗೆ 5 ಗಂಟೆಗೆ ಎದ್ದು, ಕ್ಯಾಬ್ ನಲ್ಲಿ ಡಿವೈ ಪಾಟೀಲ್‌ ಸ್ಟೇಡಿಯಂಗೆ ಹೋಗುತ್ತಿದ್ದೆ. ಇದು ತುಂಬಾ ಒತ್ತಡವನ್ನುಂಟು ಮಾಡುತ್ತಿತ್ತು. ಇದಾದ ಬಳಿಕ ಸಂಜೆ BKC ಮೈದಾನದಲ್ಲಿ ಕೋಚಿಂಗ್ ಮಾಡುತ್ತಿದ್ದೆ. ನಾನೀಗ ಓರ್ವ ನಿವೃತ್ತ ಕ್ರಿಕೆಟಿಗ, ಸದ್ಯಕ್ಕಂತೂ ನಾನು ಬಿಸಿಸಿಐ ನೀಡುವ ಪಿಂಚಣೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದೇನೆ. ಬಿಸಿಸಿಐ ನನ್ನ ಪ್ರಮುಖ ಆದಾಯದ ಮೂಲ ಎನಿಸಿದೆ. ಹೀಗಾಗಿ ನಾನು ಬಿಸಿಸಿಐಗೆ ಕೃತಜ್ಞನಾಗಿದ್ದೇನೆ ಹಾಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದರಿಂದಲೇ ನಮ್ಮ ಕುಟುಂಬ ನಿರ್ವಹಣೆ ಸಾಧ್ಯವಾಗಿದೆ ಎಂದು ವಿನೋದ್ ಕಾಂಬ್ಳಿ ಹೇಳಿದ್ದಾರೆ.

ವಿನೋದ್ ಕಾಂಬ್ಳಿ ಭಾರತ ಕ್ರಿಕೆಟ್ ತಂಡದ ಪರ ಒಟ್ಟು 104 ಏಕದಿನ ಹಾಗೂ 17 ಟೆಸ್ಟ್ ಪಂದ್ಯಗಳನ್ನಾಡಿದ್ದು, ಒಟ್ಟಾರೆ 3,561 ರನ್ ಬಾರಿಸಿದ್ದಾರೆ. 1991ರಿಂದ 2000ದ ವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ವಿನೋದ್ ಕಾಂಬ್ಳಿ 4 ಟೆಸ್ಟ್ ಶತಕ ಹಾಗೂ 2 ಏಕದಿನ ಶತಕಗಳನ್ನು ಸಿಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!