ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಆಡಳಿತದ ವಿವಿಧ ವಿಭಾಗಗಳ ಪ್ರಮುಖ ಹುದ್ದೆಗಳಿಗೆ 130ಕ್ಕೂ ಹೆಚ್ಚು ಭಾರತೀಯ ಮೂಲದ ಅಮೆರಿಕನ್ನರನ್ನು ನೇಮಿಸಿಕೊಳ್ಳುವ ಮೂಲಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಆಡಳಿತದಲ್ಲಿ ಭಾರತೀಯ ಅಮೆರಿಕನ್ನರಿಗೆ ಹೆಚ್ಚು ಪ್ರಾತಿನಿಧ್ಯ ನೀಡುವ ಭರವಸೆಯನ್ನು ಬೈಡನ್ ಈಡೇರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿದ್ದ ವೇಳೆಯಲ್ಲಿ 80ಕ್ಕೂ ಹೆಚ್ಚು ಹಾಗೂ ಬರಾಕ್ ಒಬಾಮ ಅವರ ಅಧಿಕಾರಾವಧಿಯಲ್ಲಿ 60ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರನ್ನು ನೇಮಕ ಮಾಡಲಾಗಿತ್ತು. ಬೈಡನ್ ಅವರು ಹೆಚ್ಚಿನ ಸಂಖ್ಯೆಯ ಭಾರತೀಯ ಅಮೆರಿಕನ್ನರಿಗೆ ಮಣೆ ಹಾಕುವ ಮೂಲಕ ಈ ಹಿಂದಿನ ದಾಖಲೆ ಮುರಿದಿದ್ದಾರೆ. ಅಮೆರಿಕ ಜನಸಂಖ್ಯೆಯಲ್ಲಿ ಭಾರತೀಯ ಸಮುದಾಯದ ಪ್ರಮಾಣ ಶೇ 1ರಷ್ಟಿದೆ. ಭಾರತೀಯ ಅಮೆರಿಕನ್ನರು ತಮ್ಮ ಸೇವಾ ಮನೋಭಾವದಿಂದ ಗಮನ ಸೆಳೆದಿದ್ದಾರೆ ಎಂದು ಉದ್ಯಮಿ ಎಂ.ಆರ್. ರಂಗಸ್ವಾಮಿ ಹೇಳಿದ್ದಾರೆ. ರಂಗಸ್ವಾಮಿ ಅವರು ಅಮೆರಿಕ ಮೂಲದ ಜಗತಿಕ ಸಂಸ್ಥೆಯಾದ ಇಂಡಿಯಾಸ್ಪೊರಾ ಸಂಸ್ಥಾಪಕ ಮತ್ತು ಮುಖ್ಯಸ್ಥರಾಗಿದ್ದಾರೆ.