ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಕನ್ನಡಿಗರ ಬಹುದಿನಗಳ ಬೇಡಿಕೆಯಾದ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬುದೀಗ ಮತ್ತೆ ಕನಸಾಗೇ ಉಳಿದಿದೆ. ಆರೋಗ್ಯ ಇಲಾಖೆಯು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯ ಜನತೆ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಹಲವಾರು ರೀತಿಯಲ್ಲಿ ಸರ್ಕಾರವನ್ನು, ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಕೇಳುತ್ತಲೇ ಇದ್ದರೂ ಅವರ ಮನವಿಗೆ ಯಾವುದೇ ಮನ್ನಣೆ ದೊರೆಯದಿರುವುದು ಉತ್ತರಕನ್ನಡಿಗರಿಗೆ ಹತಾಶೆಯುಂಟು ಮಾಡಿದಂತಾಗಿದೆ.
ಜಿಲ್ಲೆಯಲ್ಲಿ ಒಂದೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಏನೇ ಆರೋಗ್ಯ ತುರ್ತು ಎದುರಾದರೂ ಮಣಿಪಾಲಿಗೋ, ಮಂಗಳೂರಿಗೋ ಅಥವಾ ಇನ್ನೆಲ್ಲಿಗೋ ಓಡಬೇಕು. ಜಿಲ್ಲೆಯಿಂದ ಕನಿಷ್ಟ ಅಲ್ಲಿಗೆ ತಲುಪುವವರೆಗೆ ರೋಗಿಯು ಮಾರ್ಗ ಮಧ್ಯದಲ್ಲೇ ಪ್ರಾಣ ಕಳೆದುಕೊಂಡ ಅದೆಷ್ಟೋ ಘಟನೆಗಳು ನಡೆದಿವೆ. ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯ ನಾಗರೀಕರು ಜಿಲ್ಲೆಯಲ್ಲಿಯೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಲಿ ಎಂದು ಆಗ್ರಹಿಸುತ್ತಲೇ ಇದ್ದಾರೆ.
ಕೊಡಸಳ್ಳಿ, ಕದ್ರಾ, ಕೈಗಾ, ಸೀಬರ್ಡ್ ನೌಕಾನೆಲೆ ಹೀಗೆ ಕೇಂದ್ರ – ರಾಜ್ಯ ಸರ್ಕಾರಗಳ ಯಾವುದೇ ಯೋಜನೆಗಳಿದ್ದರೂ ಉತ್ತರಕನ್ನಡಿಗರು ಮರು ಮಾತಾಡದೇ ಜಾಗ ಬಿಟ್ಟು ಕೊಟ್ಟಿದ್ದಾರೆ. ಇದಲ್ಲದೇ ನಾಗರೀಕ ವಿಮಾನ ನಿಲ್ದಾಣ, ವಾಣಿಜ್ಯ ಬಂದರು ಹೀಗೆ ಇನ್ನೂ ಹತ್ತು ಹಲವು ಯೋಜನೆಗಳು ಜಾರಿಯಾಗಲಿವೆ. ಅವರಲ್ಲಿ ಇನ್ನೂ ಕೆಲ ನಿರಾಶ್ರಿತರಿಗೆ ಸರಿಯಾದ ಪರಿಹಾರ ದೊರೆತಿಲ್ಲ. ಅದನ್ನು ಕೇಳುವುದು ಬಿಡಿ ಕನಿಷ್ಟಪಕ್ಷ ಒಂದು ಉತ್ತಮ ವೈದ್ಯಕೀಯ ಸೌಲಭ್ಯಕ್ಕಾಗಿ ಮನವಿ ಮಾಡಿದರೆ ಅದಕ್ಕೂ ಸರಿಯಾಗಿ ಸ್ಪಂದಿಸದ ಸರ್ಕಾರಕ್ಕೆ ಜನ ಹಿಡಿಶಾಪ ಹಾಕುವಂತಾಗಿದೆ.
ಈ ಹಿಂದೆ ಎರಡೆರಡು ಬಾರಿ ಟ್ವೀಟರ್ ನಲ್ಲಿ #weneedemergencyhospitalinuttarakannada ಎಂದು ಟ್ರೆಂಡ್ ಅಭಿಯಾನಗಳಾಗಿದ್ದವು. ಬೆಂಗಲೂರಿನ ಫ್ರೀಡಂ ಪಾರ್ಕ್‌ನಲ್ಲಿಯೂ ಅಭಿಯಾನದ ಕೂಗು ಮೊಳಗಿತ್ತು. ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರು ಇಬ್ಬರೂ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರವೇ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಆರೋಗ್ಯ ಇಲಾಖೆಯ ಪ್ರಸ್ತಾವನಗೆ ಆರ್ಥಿಕ ಇಲಾಖೆ ಸಹಮತಿ ಸೂಚಿಸದೇ ಇರುವುದರಿಂದ ಜಿಲ್ಲೆಯ ಜನರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನಸು ಕನಸಾಗಿಯೇ ಉಳಿಯುವಂತಾಗಿದೆ. ಉತ್ತರಕನ್ನಡಿಗರ ಬಹುದಿನಗಳ ನಿರೀಕ್ಷೆಗೆ ಆರ್ಥಿಕ ಇಲಾಖೆ ತಣ್ಣೀರೆರೆಚಿದೆ