ಹೊಸದಿಗಂತ ವರದಿ,ಕಲಬುರಗಿ:
ಮಂಡ್ಯದ ಪೂಜಾ ಕುಣಿತ, ಚಿಕ್ಕಮಗಳೂರಿನ ವೀರಗಾಸೆ, ಧಾರವಾಡದ ಜಗ್ಗಲಿಗೆ, ಬೀದರ್ ತಮಟೆ, ರಾಯಚೂರಿನ ಚಂಡೆವಾದನ, ಬಳ್ಳಾರಿಯ ತಾಸೇರಾಮ ಡೋಲು, ಯಾದಗಿರಿ ಡೊಳ್ಳು ಕುಣಿತ ಹೀಗೆ ವಿವಿಧ ಕಲಾಪ್ರಕಾರಗಳ ಸಂಗಮ ಕಣ್ಣಿಗೆ ಹಬ್ಬದೂಟ ಬಡಿಸಿತು. ಕಲಬುರಗಿಯ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ನಡೆದ ಭವ್ಯ ಮೆರವಣಿಗೆಯಲ್ಲಿ ನಾಡಿನ ಕಲೆ-ಸಂಸ್ಕೃತಿ ವಿಜೃಂಭಿಸಿತು.
ಹೌದು, ಕಲ್ಯಾಣ ಕರ್ನಾಟಕದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ನಾಡಿನ ವಿವಿಧ ಕಲೆ-ಸಂಸ್ಕøತಿ ಬಿಂಬಿಸುವ ವಿವಿಧ ಕಲಾತಂಡಗಳ ಮೆರವಣಿಗೆ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಸಹಯೋಗದ ಈ ಕಲೆ-ಸಂಸ್ಕøತಿಯ ಸೊಬಗನ್ನು ಮಾರ್ಗದುದ್ದಕ್ಕೂ ನೆರೆದಿದ್ದ ಜನತೆ ಕಣ್ತುಂಬಿಕೊಂಡರು.
ಕಲಬುರಗಿ ಜಿಲ್ಲೆಯ ಲಂಬಾಣಿ ನೃತ್ಯ, ಖಣಿ ಹಲಗಿ, ಡೊಳ್ಳು ಕುಣಿತ, ಪುರವಂತಿಕೆ, ಚಿಟ್ಟಿಹಲಗೆ ಮೇಳ, ಹೆಜ್ಜೆ ಮೇಳ, ಚಿಲಿಪಿಲಿ ಗೊಂಬೆ ಮುಂತಾದವು ಸಹ ಮೆರವಣಿಗೆಗೆ ಮೆರಗು ನೀಡಿದವು.
ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ್ ಪಾಟೀಲ್ ಮಹಗಾಂವ್, ಸರ್ದಾರ ಶರಣಗೌಡ ಇನಾಂದಾರ್, ದತ್ತಾತ್ರೇಯ ರಾವ್ ಅವರಾದಿ, ವಿಶ್ವನಾಥ್ ರೆಡ್ಡಿ ಮುದ್ನಾಳ, ಜಗನ್ನಾಥ್ ರಾವ್ ಚಂಡ್ರಿಕಿ, ವಿದ್ಯಾಧರ ಗುರೂಜಿ, ಚನ್ನಬಸಪ್ಪ ಕುಳಗೇರಿ ಅವರ ಹೋಲುವ ವೇಷಧಾರಿಗಳು ಮಹೋತ್ಸವಕ್ಕೆ ಕಳೆ ತುಂಬಿದರು. ದೇಶದ ಮೊದಲ ಸಂಸತ್ತು ಎಂದು ಕರೆಯಲಾಗುವ ಜಗಜ್ಯೋತಿ ಬಸವಣ್ಣನವರ 12ನೇ ಶತಮಾನದ ಅನುಭವ ಮಂಟಪದ ಚಿತ್ರಣ ಕಲ್ಯಾಣ ಕರ್ನಾಟದ ಮಹತ್ವವನ್ನು ಸಾರಿತು.
ಇನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಮತೆಯ ತೊಟ್ಟಿಲು, ಕೃಷಿ ಇಲಾಖೆಯ ಬೆಳೆ ವಿಮೆ ಮೊಬೈಲ್ ಆಪ್ ಮುಂತಾದ ಸರ್ಕಾರಿ ಯೋಜನೆಗಳು ನೋಡುಗರಲ್ಲಿ ಜಾಗೃತಿ ಮೂಡಿಸಿದವು. ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಭವ್ಯ ಮೆರವಣಿಗೆ ಹಲಗೆ ಬಾರಿಸುವ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅವರು ಚಾಲನೆ ನೀಡಿದರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಅವರು ಕರಿಕಂಬಳಿ ಹೊದ್ದು, ಡೋಲು ಬಾರಿಸಿದ್ದು ವಿಶೇಷವಾಗಿತ್ತು.