ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ನಂದಿಗ್ರಾಮದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನ ಗೆಲ್ಲುವ ಮೂಲಕ ಭಾರಿ ಯಶಸ್ಸು ಪಡೆದುಕೊಂಡಿದೆ. ಇತ್ತ ಟಿಎಂಸಿ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ನಂದಿಗ್ರಾಮದ ಬೇಕುತಿ ಸಮಾಬೇ ಕೃಷಿ ಸಮಿತಿ ಕಾಪರೇಟೀವ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭಾರಿ ಮೇಲುಗೈ ಸಾಧಿಸಿದೆ. ಇದು ತೃಣಮೂಲ ಕಾಂಗ್ರೆಸ್ ನಿದ್ದೆಗೆಡಿಸಿದೆ.
ನಂದಿಗ್ರಾಮ ಬಿಜೆಪಿ ಹಾಗೂ ಟಿಎಂಸಿಗೆ ಪ್ರತಿಷ್ಠಿತ ಕಣ. ಕಾರಣ ಟಿಎಂಸಿ ತೊರೆದು ಬಿಜೆಪಿ ಸೇರಿದ ಪ್ರಮುಖ ನಾಯಕ ಸುವೇಂಧು ಅಧಿಕಾರಿ ಇದೇ ನಂದಿಗ್ರಾಮದಿಂದ ಕಳೆದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ತೀವ್ರ ಜಿದ್ದಾಜಿದ್ದಿನ ಕಣದಲ್ಲಿ ಸುವೆಂಧು ಅಧಿಕಾರಿ 1956 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದರು. ಈ ಕಾರಣಕ್ಕೆ ಬಿಜೆಪಿಗೂ ಹಾಗೂ ತೃಣಮೂಲ ಕಾಂಗ್ರೆಸ್ಗೆ ನಂದಿಗ್ರಾಮ ಪ್ರತಿಷ್ಠೆಯ ಕಣವಾಗಿದೆ.
ಇತ್ತ ನಂದಿಗ್ರಾಮದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೂಂಡಾಗಳನ್ನು ಕರೆಸಿ ಮತ ಚಲಾಯಿಸಿದೆ. ಈ ಕಾರಣಕ್ಕೆ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡಿದೆ ಎಂದು ಟಿಎಂಸಿ ಆರೋಪಿಸಿದೆ. ಇತ್ತ ಇದೇ ಆರೋಪವನ್ನು ಬಿಜೆಪಿ ಕೂಡ ಟಿಎಂಸಿ ಮೇಲೆ ಮಾಡಿದೆ. ಪ್ರತಿ ಚುನಾವಣೆಯಲ್ಲಿ ಭಾರಿ ಮುನ್ನಡೆ ಕಾಯ್ದುಕೊಳ್ಳುತ್ತಿದ್ದ ಟಿಎಂಸಿ ಇದೀಗ ಒಂದೊಂದೇ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸುವ ಲಕ್ಷಣಗಳು ಗೋಚರಿಸುತ್ತಿದೆ. ಇದು ನಂದಿಗ್ರಾಮದಿಂದ ಆರಂಭಗೊಂಡಿದೆ. ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಟಿಎಂಸಿ ಸ್ಥಾನ ಕಳೆದುಕೊಳ್ಳಲಿದೆ. ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಬಿಜೆಪಿ ಹೇಳಿದೆ.