ಇನ್ಮುಂದೆ ಯಾವುದೇ ಒತ್ತುವರಿ ಆಗದಂತೆ ತನಿಖಾ ಆಯೋಗ ರಚನೆ: ಸಿಎಂ ಬೊಮ್ಮಾಯಿ‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಲ್ಲಿ ಮುಂದೆ ಯಾವುದೇ ಒತ್ತುವರಿ ಆಗದಂತೆ ಒಬ್ಬ ನ್ಯಾಯಾಂಗ ಅಧಿಕಾರಿಯ ನೇತೃತ್ವದಲ್ಲಿ ತಾಂತ್ರಿಕ ಸದಸ್ಯರನ್ನೊಳಗೊಂಡ ತನಿಖಾ ಆಯೋಗವನ್ನು ರಚಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

ವಿಧಾನಸಭೆಯಲ್ಲಿ ಅತಿವೃಷ್ಟಿ ಮೇಲಿನ ಚರ್ಚೆಗೆ ಉತ್ತರ ನೀಡುತ್ತಾ, ಕೆರೆ, ರಾಜಕಾಲುವೆ, ಬಫರ್ ಝೋನ್ ಒತ್ತುವರಿ ಮಾಡಿರುವ ಸಂಬಂಧ ತನಿಖಾ ಆಯೋಗ ರಚಿಸಿ ಮುಂದೆ ಒತ್ತುವರಿ ಆಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನ ಮಳೆ ನಿರ್ವಹಣೆಗಾಗಿ ಬಿಡಿಎ, ಬಿಬಿಎಂಪಿ, ಜಲಮಂಡಳಿ ಒಟ್ಟಾಗಿ ಮಾಸ್ಟರ್ ಪ್ಲಾನ್ ಮಾಡಬೇಕಾಗಿದೆ. ಈಗಿರುವ ಮಾಸ್ಟರ್ ಪ್ಲಾನ್ ನ್ನು ಮರು ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ. ಇದನ್ನು ಸರಿಪಡಿಲು ಇನ್ನೂ ನಾಲ್ಕೈದು ವರ್ಷ ಆಗುತ್ತದೆ.‌ ಇದೊಂದು ನಿರಂತರ ಪ್ರಕ್ರಿಯೆ ಆಗಬೇಕಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಏನೆಲ್ಲಾ ಅತಿಕ್ರಮಣ ಆಗಿದೆ ಅದನ್ನೆಲ್ಲಾ ತೆಗೆಯುವ ಕೆಲಸ ಮಾಡುತ್ತೇವೆ. ಒಟ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿ 2,626 ಒತ್ತುವರಿ ಗುರುತಿಸಲಾಗಿದೆ ಎಂದು ಹೇಳಿದರು.

ಮಳೆ ನಿರ್ವಹಣೆಗೆ ಕಾರ್ಯಪಡೆ ರಚನೆ
ಬೆಂಗಳೂರಿನ ಪ್ರವಾಹ ನಿರ್ವಹಣೆಗೆ ಕಳೆದ ವರ್ಷ 1600 ಕೋಟಿ ಕೊಟ್ಟಿದ್ದೇವೆ.‌ ಮೊನ್ನೆ ರಾಜಕಾಲುವೆ ನಿರ್ವಹಣೆಗೆ 300 ಕೋಟಿ ರೂ. ಕೊಡಲಾಗಿದೆ.‌ ಇನ್ನು 300 ಕೋಟಿ ರೂ. ರಸ್ತೆ ಅಭಿವೃದ್ಧಿಗೆ ಕೊಡಲಾಗುತ್ತದೆ. ಸುಮಾರು 600 ಕೋಟಿ ರೂ. ಕೊಡಲಾಗುತ್ತದೆ. ಮಳೆ ನಿರ್ವಹಣೆ ಸಂಬಂಧ ಒಂದು ಕಾರ್ಯಪಡೆ ರಚನೆ ಮಾಡಲಾಗುತ್ತದೆ. ಜೊತೆಗೆ ಪ್ರತಿವರ್ಷ ಬಜೆಟ್ ನಲ್ಲಿಅನುದಾನ ಕೊಡಲಾಗುತ್ತದೆ ಎಂದು ತಿಳಿಸಿದರು.

ಎಲ್ಲಾ ಕೆರೆಗಳಿಗೆ ಸ್ಲೂಯಿಸ್ ಗೇಟ್ ಹಾಕಲು ಸೂಚನೆ ನೀಡಿದ್ದೇವೆ. ಎಲ್ಲಾ ತ್ಯಾಜ್ಯ ‌ನೀರು ಸಂಸ್ಕರಣ ಘಟಕವನ್ನು ಪ್ರಾರಂಭಿಸಲು ಸೂಚನೆ ಕೊಟ್ಟಿದ್ದೇನೆ. ಒತ್ತುವರಿ ತೆಗೆಯಬೇಕಾಗಿದೆ. ಪ್ರಭಾವಿಗಳು ರಾಜಕಾಲುವೆ ಮಾಡುವಾಗ ಒತ್ತಡ ಹೇರುತ್ತಾರೆ. ಎಲ್ಲೆಲ್ಲಿ ರಾಜಕಾಲುವೆ ಕಿರಿದಾಗಿಸಲಾಗಿದೆಯೋ ಅದನ್ನು ಸರಿ ಪಡಿಸಲಾಗುತ್ತದೆ. ಕೆಲವು ಕಡೆ ಸಣ್ಣ ನಾಲೆಗಳೇ ಕಣ್ಮರೆಯಾಗಿವೆ. ಹೊರ ವಲಯದಲ್ಲಿ ಹೊಸ ವ್ಯವಸ್ಥೆ ಮಾಡಬೇಕಾಗಿದೆ ಎಂದರು.

ಐಟಿ ಕಂಪನಿಯವರು ಬೆಂಗಳೂರು ಬಿಡ್ತಾರಾ?
ಇನ್ನು ಐಟಿ ಬಿಟಿಯವರು ಬೆಂಗಳೂರಿಗೆ ಹೆಸರು ತಂದಿದ್ದಾರೆ. ಬೆಂಗಳೂರಿಗೆ ಅವರ ಕೊಡುಗೆ ಹೆಚ್ಚಿದೆ. ಅವರು ಸ್ವಂತ ಕಟ್ಟಡದಲ್ಲಿ ಇರುವುದು ಕಡಿಮೆ. ಆದರೆ ಬಿಲ್ಡರುಗಳು ರಾಜಕಾಲುವೆ ಮುಚ್ಚಿ ಐಟಿ ಪಾರ್ಕ್ ಕಟ್ಟಿದ್ದಾರೆ. ಇದನ್ನು ಸರಿಪಡಿಸುತ್ತೇವೆ. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗಲ್ಲ ಎಂದರು. ಬೆಂಗಳೂರು ಐಟಿ ಬಿಟಿ ಸಂಸ್ಥೆಯವರಿಗೂ ಪ್ರಮುಖವಾಗಿದೆ. ಉತ್ತಮ ವಾತಾವರಣ, ತಂತ್ರಜ್ಞಾನ ಮಾನವ ಸಂಪನ್ಮೂಲ ಇಲ್ಲಿದೆ. ಕರ್ನಾಟಕ ಜನರ ಕೊಡುಗೆ ಮತ್ತು ರಾಜ್ಯದ ಕೊಡುಗೆನೂ ಅಪಾರವಾಗಿದೆ. ಯಾರು ಬೆಂಗಳೂರು ಬಿಟ್ಟು ಹೋಗ್ತೀನಿ ಅಂದಿದ್ದರೋ, ಅವರು ಯಾರೂ ಬಿಟ್ಟು ಹೋಗಿಲ್ಲ. ಹೋದವರು ವಾಪಸ್​ ಬೆಂಗಳೂರಿಗೆ ಬಂದಿದ್ದಾರೆ ಎಂದು ಸಿಎಂ ತಿಳಿಸಿದರು.

ನೆರೆ ಸಂದರ್ಭ ರಾಜ್ಯ ಸರ್ಕಾರ ಜನರ‌ ಸಂಕಷ್ಟಕ್ಕೆ ಧಾವಿಸಿದೆ. ದಕ್ಷವಾಗಿ, ವೇಗವಾಗಿ ಕೆಲಸ ಮಾಡಿದ್ದೇವೆ. ಮಳೆ ಹಾಗೂ ಬೆಳೆ ಪರಿಹಾರವನ್ನು ನಾವು ತಕ್ಷಣವಾಗಿ ಕೊಟ್ಟಿದ್ದೇವೆ. ಒಂದು ಕ್ಷಣವೂ ತಡ ಮಾಡದೇ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಮಳೆ ಹಾನಿ ಪರಿಹಾರ ವಿತರಣೆ
ಸುಮಾರು 1,550 ಕೋಟಿ ರೂ.‌ಬೆಳೆ ನಷ್ಟ ಪರಿಹಾರ ಹಣ ಅಂದಾಜಿಸಲಾಗಿದೆ. ನಿನ್ನೆಯವರೆಗೆ 3,25,766 ರೈತರಿಗೆ ಈಗಾಗಲೇ 377.44 ಕೋಟಿ ಹಣ ಪಾವತಿಯಾಗಿದೆ. ಬೆಳೆ ನಾಶ ಆಗಿ ಒಂದೂವರೆ ತಿಂಗಳಿನಲ್ಲೇ ಹಣ ಪಾವತಿಯಾಗುತ್ತಿದೆ. ನೆರೆಗೆ 42,048 ಮನೆಗಳು ಹಾಳಾಗಿವೆ. ಆ ಮೂಲಕ ನೆರೆಗೆ 850 ಕೋಟಿ ರೂ. ಮನೆ ನಷ್ಟ ಆಗಿದೆ. ಈ ಪೈಕಿ ನಾವು ಮೊದಲ ಕಂತಿನಲ್ಲಿ 196 ಕೋಟಿ ರೂ.‌ಬಿಡುಗಡೆ ಮಾಡಿದ್ದೇವೆ ಎಂದರು.
ಮೂರು ವರ್ಷದಲ್ಲಿ 3104.74 ಕೋಟಿ ರೂ.‌ಬಿಡುಗಡೆ ಮಾಡಿದ್ದೇವೆ. 1,527 ಕೋಟಿ ರೂ.‌ ಇನ್ನೂ ಹಣ ಬೇಕಾಗಿದೆ. ಅದನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. NDRF ನಡಿ 1,645 ಕೋಟಿ ರೂ. ನಷ್ಟ ಪರಿಹಾರದ ಬೇಡಿಕೆ ಇಟ್ಟಿದ್ದೇವೆ. ನಮಗೆ ಕೂಡಲೇ ಬೇಕಾಗಿರುವುದು ಬೆಳೆ ನಷ್ಟಕ್ಕೆ 1,550 ಕೋಟಿ ರೂ. ಬೇಕು. ಮನೆ‌ ಹಾನಿಗೆ 850 ಕೋಟಿ ರೂ., ಮೂಲಭೂತ ಸೌಕರ್ಯಕ್ಕೆ 1200 ಕೋಟಿ ರೂ. ಬೇಕಾಗಿದೆ. ಅವುಗಳನ್ನು ಕೂಡಲೇ ಬಿಡುಗಡೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಮಳೆಯ ನಿರ್ವಹಣೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ, ಬೆಳೆ ನಷ್ಟ, ಮನೆ ನಷ್ಟಕ್ಕೆ ಪರಿಹಾರ ಕೊಡುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!