ಸುದ್ದಿ ವರದಿಗಾರಿಕೆಯಲ್ಲಿ ಮರಳಿ ತರಬೇಕಿದೆ ತಟಸ್ಥತೆ: ಕೇಂದ್ರ ಸಚಿವ ಅನುರಾಗ್ ಠಾಕೂರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಸುದ್ದಿ ವರದಿಗಾರಿಕೆಯಲ್ಲಿ ಇಂದು ತಟಸ್ಥತೆಯನ್ನು ಮರಳಿ ತರಬೇಕಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೋಮವಾರ ಹೇಳಿದ್ದಾರೆ.
ಏಷ್ಯಾ ಪೆಸಿಫಿಕ್ ಇನ್​ಸ್ಟಿಟ್ಯೂಟ್ ಫಾರ್ ಬ್ರಾಡಕಾಸ್ಟಿಂಗ್ ಡೆವಲಪ್​ಮೆಂಟ್​ ಸಂಸ್ಥೆಯಿಂದ ಆಯೋಜಿಸಲಾದ ಸಮಾವೇಶದಲ್ಲಿ ಮಾತನಾಡಿದ ಅವರು, ಸದ್ದು ಮಾಡುವ ಚರ್ಚೆಗಳು ಕೆಲ ವೀಕ್ಷಕರನ್ನು ಟಿವಿಗಳತ್ತ ಸೆಳೆಯಬಹುದು ಬಿಟ್ಟರೆ ಆ ಚರ್ಚೆಗಳಿಗೆ ಯಾವುದೇ ವಿಶ್ವಾಸಾರ್ಹತೆ ಇರುವುದಿಲ್ಲ ಎಂದು ತಿಳಿಸಿದರು.
ಇಂದು ಮುಖ್ಯವಾಹಿನಿಯ ಮಾಧ್ಯಮಗಳ ಅಸ್ತಿತ್ವಕ್ಕೆ ಬೆದರಿಕೆ ಇರುವುದು ಹೊಸ ಯುಗದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದಲ್ಲ. ಬದಲಾಗಿ ಸ್ವತಃ ಮುಖ್ಯವಾಹಿನಿಯ ಮಾಧ್ಯಮ ಚಾನೆಲ್​ಗಳಿಂದಲೇ ಅಸ್ತಿತ್ವಕ್ಕಾಗಿ ಬೆದರಿಕೆಯಿದೆ ಎಂದರು.
ಸಮಾಜವನ್ನು ಧ್ರುವೀಕರಣ ಮಾಡುವ, ಸುಳ್ಳು ನಿರೂಪಣೆಗಳನ್ನು ಹರಡುವ ಮತ್ತು ಗಂಟಲು ಹರಿದು ಹೋಗುವಂತೆ ಕೂಗಾಡುವ ಅತಿಥಿಗಳನ್ನು ಆಹ್ವಾನಿಸಲು ನೀವು ನಿರ್ಧರಿಸಿದರೆ ನಿಮ್ಮ ಚಾನೆಲ್‌ನ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ. ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅತಿಥಿಯ ಬಗ್ಗೆ ನಿಮ್ಮ ನಿರ್ಧಾರಗಳು, ಧ್ವನಿ ಮತ್ತು ದೃಶ್ಯಗಳು ಪ್ರೇಕ್ಷಕರ ದೃಷ್ಟಿಯಲ್ಲಿ ನಿಮ್ಮ ವಿಶ್ವಾಸಾರ್ಹತೆ ವ್ಯಾಖ್ಯಾನಿಸುತ್ತವೆ ಎಂದು ಸಚಿವರು ಹೇಳಿದರು.

ವೀಕ್ಷಕರು ಟಿವಿಯಲ್ಲಿ ಬರುವ ಸುದ್ದಿ ಕಾರ್ಯಕ್ರಮ ವೀಕ್ಷಿಸಲು ಒಂದು ನಿಮಿಷ ಸಮಯ ನೀಡಬಹುದು. ಆದರೆ ಆಂಕರ್, ಚಾನೆಲ್ ಅಥವಾ ಬ್ರ್ಯಾಂಡ್ ಅನ್ನು ಪಾರದರ್ಶಕ ಸುದ್ದಿಯ ಮೂಲವೆಂದು ಅವರು ಎಂದಿಗೂ ನಂಬುವುದಿಲ್ಲ.ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳು ಮಾಧ್ಯಮ ನೀತಿ ಮತ್ತು ಮೌಲ್ಯಗಳನ್ನು ಉಳಿಸಿಕೊಂಡು ಸತ್ಯ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ವೇಗವಾಗಿ ಒದಗಿಸುವ ದೊಡ್ಡ ಸವಾಲನ್ನು ಹೊಂದಿವೆ ಎಂದು ಠಾಕೂರ್ ಹೇಳಿದರು.

ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವವರೊಂದಿಗೆ ಸ್ಪರ್ಧಿಸುವ ಪ್ರಲೋಭನೆಗಳ ಹೊರತಾಗಿಯೂ ಪತ್ರಕರ್ತರು ಸತ್ಯ ಸುದ್ದಿಗಳನ್ನು ವರದಿ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ಠಾಕೂರ್ ಹೇಳಿದರು.

ಇದೇ ವೇಳೆ ಕೋವಿಡ್​-19 ಸಾಂಕ್ರಾಮಿಕದ ಸಮಯದಲ್ಲಿ ಸಾರ್ವಜನಿಕ ಸೇವೆಯ ಸಂದೇಶಗಳನ್ನು ಜನರಿಗೆ ತಲುಪಿಸಿದ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊಗಳನ್ನು ಅವರು ಶ್ಲಾಘಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!