ತಮಿಳುನಾಡಾಯ್ತು, ಇದೀಗ ಯುಪಿಯಲ್ಲಿ ಆಸ್ತಿಕಬಳಿಕೆ: ಚಂದ್ರ ಶೇಖರ ಆಜಾದ್‌ ಮೈದಾನ ತನ್ನದೆಂದ ವಕ್ಫ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿನ ಸಾವಿರಾರು ವರ್ಷಗಳಷ್ಟು ಹಳೆಯ ದೇವಸ್ಥಾನವುಳ್ಳ ಹಿಂದೂ ಬಾಹುಳ್ಯದ ಗ್ರಾಮವನ್ನು ಕಬಳಿಸ ಹೊರಟಿರೋ ವಕ್ಫ್‌ ಪ್ರಕರಣ ಹಸಿಯಾಗಿರುವಾಗಲೇ ಯುಪಿಯಲ್ಲಿಯೂ ಕೂಡ ಆಸ್ತಿ ಕಬಳಿಕೆಗೆ ವಕ್ಫ್ ಹುನ್ನಾರ‌ ನಡೆಸುತ್ತಿರುವ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ. ಉತ್ತರ ಪ್ರದೇಶ ವಕ್ಫ್ ಮಂಡಳಿಯು ಈಗ ಪ್ರಯಾಗರಾಜ್‌ನಲ್ಲಿರುವ ಐತಿಹಾಸಿಕ ಚಂದ್ರಶೇಖರ್ ಆಜಾದ್ ಪಾರ್ಕ್‌ ಮೇಲೆ ತನ್ನ ಹಕ್ಕು ಸಾಧಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಟೈಮ್ಸ್ ನೌನ ವಿಶೇಷ ವರದಿಯ ಪ್ರಕಾರ, ಸಾರ್ವಜನಿಕ ಉದ್ಯಾನವನದ ಆವರಣದಲ್ಲಿ ಅಕ್ರಮವಾಗಿ ಮಜರ್‌ಗಳು ಮತ್ತು ಮಸೀದಿಗಳ ನಿರ್ಮಾಣವನ್ನು ವಕ್ಫ್ ಮಂಡಳಿ ಬೆಂಬಲಿಸಿದೆ ಎಂದು ಆರೋಪಿಸಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಇಸ್ಲಾಮಿಕ್ ಸಮಿತಿಯು ಸುಮಾರು 200 ವರ್ಷಗಳಿಂದ ಮಸೀದಿಯು ಉದ್ಯಾನದಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಿಕೊಂಡಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಲಹಾಬಾದ್ ಹೈಕೋರ್ಟ್ ಪ್ರಯಾಗ್‌ರಾಜ್‌ನಲ್ಲಿರುವ ಚಂದ್ರಶೇಖರ್ ಆಜಾದ್ ಪಾರ್ಕ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮಸೀದಿ ಮತ್ತು ಮಜಾರ್ ಅನ್ನು ತಕ್ಷಣ ತೆಗೆದುಹಾಕುವಂತೆ ಆದೇಶ ನೀಡಿತ್ತು. ಆದರೆ ಇದು ಅಕ್ರಮ ಕಟ್ಟಡವೆಂದು ತಿಳಿದಿದ್ದರೂ ಅದನ್ನು ತೊರೆಯದೇ ಟೆಂಟ್‌ ಗಳನ್ನು ನಿರ್ಮಿಸಿ ಅದು ಬಳಕೆಯಲ್ಲಿರುವಂತೆ ನೋಡಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮುಸ್ಲಿಂ ಸಮುದಾಯದ ಕೆಲವರು ಅಕ್ರಮವಾಗಿ ಕೃತಕ ಸಮಾಧಿಗಳನ್ನು ನಿರ್ಮಿಸಿ ಕಟ್ಟಡವನ್ನು ಮಸೀದಿಯನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿರುವುದರಿಂದ ಈ ಉದ್ಯಾನವನದ ಅಸ್ತಿತ್ವಕ್ಕೆ ಅಪಾಯವಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಈ ಹಿಂದೆ ಪ್ರಕರಣದ ಕುರಿತು ಅಕ್ರಮ ಕಟ್ಟಡಗಳ ತೆರವಿಗೆ ಆದೇಶಿಸಿದ್ದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ಮತ್ತು ನ್ಯಾಯಮೂರ್ತಿ ಪಿಯೂಷ್ ಅಗರ್ವಾಲ್ ಅವರ ವಿಭಾಗೀಯ ಪೀಠವು 1975 ರ ನಂತರ ಈ ಐತಿಹಾಸಿಕ ಉದ್ಯಾನವನದ ಮೇಲೆ ನಿರ್ಮಾಣವಾಗಿರುವ ಎಲ್ಲಾ ಅಕ್ರಮ ಅತಿಕ್ರಮಣಗಳನ್ನು ಎರಡು ದಿನಗಳ ಅವಧಿಯಲ್ಲಿ ತೆಗೆದುಹಾಕಬೇಕು ಎಂದು ಆದೇಶಿಸಿತ್ತು.

ನಂತರ, ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರವು ಶುಕ್ರವಾರ ರಾತ್ರಿ ಚಂದ್ರಶೇಖರ್ ಆಜಾದ್ ಪಾರ್ಕ್‌ನಿಂದ 3 ಗೋರಿಗಳು ಮತ್ತು 14 ಸಮಾಧಿಗಳನ್ನು ಕೆಡವಿತು. ಅಲಹಾಬಾದ್ ಹೈಕೋರ್ಟ್‌ನ ಆದೇಶದ ಮೇರೆಗೆ ಪ್ರಾಧಿಕಾರವು ಸಾರ್ವಜನಿಕ ಉದ್ಯಾನವನದ ಅತಿಕ್ರಮಣಗಳನ್ನು ತೆಗೆದುಹಾಕಲು ಕ್ರಮ ಕೈಗೊಂಡಿತ್ತು.
ಆದಾಗ್ಯೂ, ಮಸೀದಿ ಸೇರಿದಂತೆ ಕೆಲವು ಅಕ್ರಮ ಕಟ್ಟಡಗಳು ಉದ್ಯಾನವನದ ಆವರಣದಲ್ಲಿಯೇ ಉಳಿದಿವೆ ಎಂದು ಆರೋಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!