ಹಿಜಾಬ್‌ ವಿರೋಧಿಸಿ ಇರಾನ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ, ಮೂವರು ಸಾವು, ತಣಿಯದ ಜನರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಜಾಬ್‌ ಧರಿಸದ ಅಪರಾಧಕ್ಕೆ ನೈತಿಕ ಪೊಲೀಸರಿಂದ ಥಳಿತಕ್ಕೆ ಒಳಗಾಗಿ ಯುವತಿ ಬಲಿಯಾದ ಪ್ರಕರಣ ಇರಾನ್ ಜನರ ತಾಳ್ಮೆ ಕೆಡಿಸಿದೆ. ಇರಾನ್ ಸರ್ಕಾರದ ಹಿಜಾಬ್‌ ನೀತಿಯನ್ನು ವಿರೋಧಿಸಿ ಪ್ರಮುಖ ನಗರಗಳಲ್ಲಿ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿದೆ. ಇದೇ ವೇಳೆ ಪ್ರತಿಭಟನಾಕಾರರ ಮೇಲೆ ಸರ್ಕಾರ ಅಮಾನುಷ ವರ್ತನೆ ತೋರುತ್ತಿದ್ದು ಸರ್ಕಾರಿ ಪಡೆಗಳ ಗುಂಡಿನ ದಾಳಿಗೆ ಮೂವರು ಪ್ರತಿಭಟನಾಕಾರರು ಬಲಿಯಾಗಿದ್ದಾರೆ.
ಹಿಜಾಬ್ ಅನ್ನು ಸರಿಯಾಗಿ ಧರಿಸದ ಕಾರಣಕ್ಕೆ ನೈತಿಕ ಪೊಲೀಸರು ಮಹ್ಸಾ ಅಮಿನಿ ಎಂಬ 22 ವರ್ಷದ ಯುವತಿಯನ್ನು ಬಂಧಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದರು. ಆಕೆ ಪೊಲೀಸರ ವಶದಲ್ಲಿದ್ದಾಗಲೇ ಸಾವನ್ನಪ್ಪಿದ್ದಳು. ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆದ ಗುರುತುಗಳಿದ್ದವು. ಈ ದುರಂತ ಘಟನೆಯ ಬಳಿಕ ಪೊಲೀಸರ ಕ್ರೂರ ವರ್ತನೆ ಹಾಗೂ ಸರ್ಕಾರದ ಧಾರ್ಮಿಕ ಕಠೋರ ನೀತಿಗಳ ವಿರುದ್ಧ ಇರಾನ್‌ ನಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಮಹಿಳೆಯರು ಬೀದಿಗಿಳಿದು ಹಿಜಾಬ್‌ ಕಿತ್ತೆಸೆದು, ಸುಟ್ಟು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಮೂರು ಜನರು ಜನರು ಸಾವನ್ನಪ್ಪಿದ ಬಳಿಕ ಜನರ ಆಕ್ರೋಶಗಳು ಮತ್ತಷ್ಟು ಹೆಚ್ಚಿವೆ.  ಇರಾನ್‌ನ ಧಾರ್ಮಿಕ ನಾಯಕತ್ವದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮಂಗಳವಾರ ಸತತ ನಾಲ್ಕನೇ ದಿನ ದೇಶಾದ್ಯಂತದ ನಗರಗಳು ಮತ್ತು ಪಟ್ಟಣಗಳಲ್ಲಿ ಮಹಿಳೆಯರು ಮತ್ತು ಪುರುಷರು ಬೀದಿಗಿಳಿದು ತೀವ್ರ ಪ್ರತಿಭಟನೆಯಲ್ಲಿ ತೊಡಗಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಚಿತ್ರಗಳು ತೋರಿಸಿವೆ. ಹಿಜಾಬ್ ಅನ್ನು ಕಡ್ಡಾಯಗೊಳಿಸಿದ ಸರ್ಕಾರ ಕ್ರಮಗಳು ಜನರಿಗೆ ಪ್ರತಿಕೂಲ ಮತ್ತು ತಾರತಮ್ಯದಿಂದ ಕೂಡಿದ್ದು ಹಾಗೂ ನೈತಿಕ ಪೊಲೀಸರನ್ನು ವಿಸರ್ಜಿಸಲು ಆಗ್ರಹಿಸಿ ಜನರು  ಅರ್ಜಿಗಳನ್ನು ರವಾನಿಸುವ ಹೋರಾಟವನ್ನು ಪ್ರಾರಂಭಿಸಿದ್ದಾರೆ.
ಇರಾನ್‌ ಪಡೆಗಳು ಜನರನ್ನು ಥಳಿಸುತ್ತಿರುವುದು, ಪ್ರತಿಭಟನಾಕಾರರ ಮೇಲೆ ಗುಂಡುಗಳು ಮೊರೆಯುತ್ತಿರುವುದು ಹಾಗೂ ಜನರು ರೊಚ್ಚಿಗೆದ್ದು ಪ್ರತಿಭಟನೆಯಲ್ಲಿ ತೊಡಗಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತವೆ. ಸೋಮವಾರ ಕುರ್ದಿಸ್ತಾನ್ ಪ್ರದೇಶದಲ್ಲಿ ಪ್ರತಿಭಟನೆ ವೇಳೆ 221 ಜನರು ಗಾಯಗೊಂಡಿದ್ದಾರೆ ಮತ್ತು 250 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಗಳು ಹೇಳಿವೆ.
ಪ್ರಸ್ತುತ ನ್ಯೂಯಾರ್ಕ್‌ನಲ್ಲಿರುವ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮೊದಲ ಬಾರಿಗೆ ಮಾತನಾಡಲು ಅಡ್ಡಿಯುಂಟಾಗಿದೆ. ನ್ಯೂಯಾರ್ಕ್‌ನಲ್ಲಿರುವ ಮಾನವ ಹಕ್ಕುಗಳ ಗುಂಪುಗಳು ಅವರ ಉಪಸ್ಥಿತಿಯ ವಿರುದ್ಧ ಪ್ರತಿಭಟಿಸುತ್ತಿವೆ ಮತ್ತು ಅವರ ವಿರುದ್ಧ ಕಾನೂನು ಕ್ರಮಗಳ ಕೈಗೊಳ್ಳಲು ಒತ್ತಾಯಿಸಿವೆ.
ಜಿನೀವಾದಲ್ಲಿರುವ  ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ಇತ್ತೀಚಿನ ತಿಂಗಳುಗಳಲ್ಲಿ ಇರಾನ್‌ನ ನೈತಿಕತೆಯ ಪೊಲೀಸರು ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ. ಹಿಜಾಬ್ ಎಂದು ಕರೆಯಲ್ಪಡುವ ಇಸ್ಲಾಮಿಕ್ ಶಿರಸ್ತ್ರಾಣವನ್ನು ಸರಿಯಾಗಿ ಧರಿಸದ ಮಹಿಳೆಯರನ್ನು ಈ ಪೊಲೀಸರು ಗುರಿಯಾಗಿಸಿಕೊಂಡಿದ್ದಾರೆ. ಹಿಜಾಬ್ ಅನ್ನು ತುಂಬಾ ಸಡಿಲವಾಗಿ ಧರಿಸಿದ್ದಕ್ಕಾಗಿ ಮಹಿಳೆಯರಿಗೆ ಕಪಾಳಮೋಕ್ಷ, ಲಾಠಿ ಪ್ರಹಾರ ಮತ್ತು ಪೊಲೀಸ್ ವ್ಯಾನ್‌ಗಳಿಗೆ ಎಸೆಯುವುದನ್ನು ತಾನು ಪರಿಶೀಲಿಸಿದ ವೀಡಿಯೊಗಳು ತೋರಿಸಿವೆ ಎಂದು ಅದು ಹೇಳಿದೆ.
ಜನರ ಕೋಪವು ತಮ್ಮ ನಿಯಂತ್ರಣದಿಂದ ಹೊರಬರಬಹುದೆಂದು ಇರಾನ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಕಳವಳಗೊಳಡಿರುವ ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಹಾಯಕರು ಸೋಮವಾರ ಅಮಿನಿಯ ಕುಟುಂಬದ ಮನೆಗೆ ಎರಡು ಗಂಟೆಗಳ ಕಾಲ ಭೇಟಿ ನೀಡಿ ವಿವಾದ ತಣ್ಣಗಾಗಿಸಲು ಯತ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!