ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾಗಿದ್ದು, ಅವರ ವಿರುದ್ಧ ಪೊಲೀಸರಿಗೆ ದೂರು ದಾಖಲಾಗಿದೆ.
ಅಜಯ್ ದೇವಗನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ ನೂತನ ಸಿನಿಮಾ ‘ಥ್ಯಾಂಕ್ ಗಾಡ್’ನಲ್ಲಿ ಇವರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ. ಮಾತ್ರವಲ್ಲ, ನಿರ್ಮಾಣ ಸಂಸ್ಥೆಯಾದ ಟಿ-ಸೀರಿಸ್ ವಿರುದ್ಧವೂ ದೂರು ನೀಡಲಾಗಿದೆ.
ಸಿನಿಮಾದಲ್ಲಿ ಪುರಾಣ ಪುರುಷ ಚಿತ್ರಗುಪ್ತನ ಅಸಭ್ಯವಾಗಿ ಬಿಂಬಿಸಲಾಗಿದೆ. ಚಿತ್ರಗುಪ್ತನನ್ನು ಆಧುನಿಕ ಉಡುಪಿನಲ್ಲಿ ತೋರಿಸಿರುವುದಷ್ಟೇ ಅಲ್ಲದೆ, ಆತನನ್ನು ಅರೆಬೆತ್ತಲೆ ಮಹಿಳೆಯರು ಸುತ್ತುವರಿದಿರುವಂತೆ ಕೂಡ ಚಿತ್ರೀಕರಿಸಿರುವುದು ಟ್ರೇಲರ್ನಲ್ಲಿ ಕಂಡುಬಂದಿದೆ ಎಂಬುದಾಗಿ ಕಾಯಸ್ಥ ಸಮಾಜದ ಪ್ರತಿನಿಧಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಚಿತ್ರಗುಪ್ತರನ್ನು ಅಸಭ್ಯವಾಗಿ ಚಿತ್ರಿಸಿರುವುದು ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವುದಷ್ಟೇ ಅಲ್ಲದೆ, ಸಾಮಾಜಿಕ ಸಾಮರಸ್ಯವನ್ನು ಕೆಡಿಸುವಂಥದ್ದು. ಹೀಗಾಗಿ ಈ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.