ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ರಾಜಸ್ಥಾನ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ಉಂಟುಮಾಡುತ್ತಿದೆ. ಸಿಎಂ ಆಗಿರುವ ಅಶೋಕ್ ಗೆಹ್ಲೋಟ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಅಶೋಕ್ ಗೆಹ್ಲೋಟ್ ನಂತರ ಸಿಎಂ ಯಾರಾಗುತ್ತಾರೆ ಎಂಬ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿದ್ದು, ಸಚಿನ್ ಪೈಲಟ್ ಸಿಎಂ ಅಭ್ಯರ್ಥಿ ಎಂಬುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಬಹುತೇಕ ಕಾಂಗ್ರೆಸ್ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಅಶೋಕ್ ಗೆಹ್ಲೋಟ್ ಬಣದ ಸುಮಾರು 82 ಶಾಸಕರು ಸ್ಪೀಕರ್ ಸಿಪಿ ಜೋಶಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಚಿನ್ ಪೈಲಟ್ ಅವರನ್ನು ಸಿಎಂ ಹುದ್ದೆಗೆ ನೇಮಿಸಬಾರದು. ಅಶೋಕ್ ಗೆಹ್ಲೋಟ್ ಬಣದ ಯಾರನ್ನಾದರೂ ಸಿಎಂ ಹುದ್ದೆಗೆ ನೇಮಿಸುವಂತೆ ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯಿಸುತ್ತಿದ್ದಾರೆ. ಸಿಎಂ ಅಶೋಕ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಭಾನುವಾರ ಶಾಸಕರೊಂದಿಗೆ ಸಭೆ ನಡೆಸಿದರು. ಈ ಸಭೆಗೆ ಸಚಿನ್ ಪೈಲಟ್ ವರ್ಗದ ಶಾಸಕರು ಮಾತ್ರ ಭಾಗವಹಿಸಿದ್ದು, ಅಶೋಕ್ ಬಣದ ಶಾಸಕರು ಗೈರಾದ ಕಾರಣ ಸಭೆಯನ್ನು ನಿಲ್ಲಿಸಲಾಯಿತು.
ಮಲ್ಲಿಕಾರ್ಜುನ ಖರ್ಗೆ ಇಂದು (ಸೋಮವಾರ) ಬಂಡಾಯ ಶಾಸಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಶಾಸಕರು ಅವರೊಂದಿಗೆ ಖುದ್ದು ಮಾತನಾಡುವಂತೆ ಮನವಿ ಮಾಡಿದರು. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ನಂತರವೇ ರಾಜಸ್ಥಾನ ಸಿಎಂ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹಲವು ಶಾಸಕರು ಸಲಹೆ ನೀಡುತ್ತಿದ್ದಾರೆ. ಇನ್ನೂ ಶಾಸಕರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅಶೋಕ್ ಗೆಹ್ಲೋಟ್, ಈ ಬಗ್ಗೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದು ಕೈ ಕೊಡವಿದ್ದಾರೆ.
200 ಸ್ಥಾನಗಳ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 108 ಶಾಸಕರನ್ನು ಹೊಂದಿದೆ. ಅವರಲ್ಲಿ 90 ಮಂದಿ ಅಶೋಕ್ ಗೆಹ್ಲೋಟ್ ಬೆಂಬಲಿಗರಿದ್ದಾರೆ. ಸದ್ಯ ಶಾಸಕರ ರಾಜೀನಾಮೆ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಡಿಸಿದೆ.